

ಪ್ರಶಾಂತ ಭಾಗ್ವತ, ಉಡುಪಿ
ಬೇಸಿಗೆ ಆರಂಭಗೊಂಡಿದ್ದು, ಹಲವೆಡೆ ಪ್ರಾರಂಭದಲ್ಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ಆದರೆ, ಉಡುಪಿ ಜಿಲ್ಲಾಡಳಿತ ಈ ಬಾರಿಯ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಉಡುಪಿ ನಗರಸಭೆಯೂ ಸಹ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಕೊರತೆ ಆಗದಂತೆ ಕಾಳಜಿ ವಹಿಸಿದೆ. ಕಳೆದ ಮಳೆಗಾಲದ ಬಳಿಕ ನೀರು ಸಂಗ್ರಹಕ್ಕೆ ವಿವಿಧ ಉಪಕ್ರಮ ಅಳವಡಿಸಿದ್ದಲ್ಲದೆ, ನಗರಕ್ಕೆ ನೀರು ಪೂರೈಸುವ ಬಜೆ ಡ್ಯಾಂನಲ್ಲಿ ನೀರು ಸಂಗ್ರಹಕ್ಕೆ ವಿಶೇಷ ಮುತುವರ್ಜಿ ವಹಿಸಿದೆ.
ನಗರಸಭೆಯ ವತಿಯಿಂದ 5 ಕೊಳವೆಬಾವಿಗಳಿಗೂ ಸಹ ಮಳೆ ನೀರು ಕೊಯ್ಲು (ವಾಟರ್ ಹಾರ್ವೆಸ್ಟಿಂಗ್) ಪ್ರಕ್ರಿಯೆ ಮಾಡಲಾಗಿದೆ. ಬಜೆ ಡ್ಯಾಂ ಅಷ್ಟೇ ಅಲ್ಲದೆ, ಶಿರೂರು ಡ್ಯಾಂನಲ್ಲಿಯೂ ನೀರು ಸಂಗ್ರಹವಿದ್ದು ಅದು ಮೇ 20ರ ವರೆಗೆ ಪೂರೈಕೆ ಮಾಡಬಹುದಾಗಿದೆ. ವಾರಾಹಿ ಯೋಜನೆಯಿಂದಲೂ ನೀರು ಸರಬರಾಜು ಆಗಲಿದ್ದು, ಉಡುಪಿ ನಗರದಲ್ಲಿ ಈ ವರ್ಷದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಕೊರತೆ ಆಗದು ಎನ್ನಲಾಗಿದೆ.
ಉಡುಪಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಿಲ್ಲೆಯಲ್ಲಿ ವಾಡಿಕೆ ಮಳೆ 4,535 ಮಿ.ಮೀ. ಇದ್ದು, 5,261 ಮಿ.ಮೀ. ಸುರಿದು ಶೇ.16 ಹೆಚ್ಚು ಮಳೆಯಾಗಿದ್ದರಿಂದ ನೀರಿನ ಕೊರತೆಯಾಗದು. ಜಿಲ್ಲಾ ವಿಪತ್ತು ನಿರ್ವಹಣಾ ಪಿಡಿ ಖಾತೆಯಲ್ಲಿ 10.15 ಕೋಟಿ ರೂ. ಹಾಗೂ ತಾಲೂಕು ಮಟ್ಟದಲ್ಲಿ ತಹಸೀಲ್ದಾರರ ವಿಪತ್ತು ಪಿಡಿ ಖಾತೆಯಲ್ಲಿ 1.53 ಕೋಟಿ ರೂ. ಅನುದಾನ ಲಭ್ಯವಿದ್ದು ಬರ ನಿರ್ವಹಣೆಗೂ ಹಣದ ಕೊರತೆ ಇಲ್ಲ. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ