ಬೇಸಿಗೆ ಶಿಬಿರಗಳು ಮಕ್ಕಳ ಮನೋವಿಕಾಸಕ್ಕೆ ಪೂರಕ : ರಂಗಕರ್ಮಿ ಅರಸೀಕೆರೆ ಯೋಗಾನಂದ

summer camp
Published on

ಮೈಸೂರು: ಬೇಸಿಗೆ ಶಿಬಿರಗಳು ಮಕ್ಕಳ ಮನೋವಿಕಾಸಕ್ಕೆ ಪೂರಕ ಎಂದು ರಂಗಕರ್ಮಿ ಅರಸೀಕೆರೆ ಯೋಗಾನಂದ ಅಭಿಪ್ರಾಯಪಟ್ಟರು.

ರಾಮಕೃಷ್ಣನಗರದ ಪರಮಹಂಸ ಯೋಗಾ ಮಹಾವಿದ್ಯಾಲಯ, ಇಂಟರ್‌ನ್ಯಾಷನಲ್ ಯೋಗ ಸ್ಕೂಲ್, ಇಂಟರ್ ನ್ಯಾಷನಲ್ ಯೋಗ ಆರ್ಗನೈಜೇಷನ್ ವತಿಯಿಂದ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಬುಧವಾರ ಮಾತನಾಡಿದರು.

ಈ ಶಿಬಿರದಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾದ ಅಂತರ್ ದೃಷ್ಟಿ, ಯೋಗ, ಸಂಗೀತ, ನೃತ್ಯ, ನಾಟಕ ಕಲಿಸಲಾಗಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಕೂಡ ಮುಖ್ಯ. ಆದ್ದರಿಂದ ಪಾಲಕರು ಮಕ್ಕಳ ಆಸಕ್ತಿ ಗುರುತಿಸಿ, ಆವರ ಆಸಕ್ತಿಯ ಕ್ಷೇತ್ರದಲ್ಲೂ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಮೊದಲೆಲ್ಲ ಬೇಸಿಗೆ ರಜೆ ಬಂದಾಗ ಮಕ್ಕಳು ಅಜ್ಜಿ ಮನೆಗೆ ಹೋಗುತ್ತಿದ್ದರು. ಆ ರೀತಿಯ ಕೂಡು ಕುಟುಂಬ ವ್ಯವಸ್ಥೆ ಇತ್ತು. ಈಗ ಮಕ್ಕಳಿಗೆ ಆ ರೀತಿಯ ಜೀವನಾನುಭವವೇ ಸಿಗುತ್ತಿಲ್ಲ ಎಂದು ಅವರು ವಿಷಾದಿಸಿದರು.

ಬೇಸಿಗೆ ಶಿಬಿರದ ಎರಡನೇ ತಂಡಕ್ಕೆ ಚಾಲನೆ ನೀಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಮಕ್ಕಳನ್ನು ಟಿವಿ ಮತ್ತು ಮೊಬೈಲ್‌ನಿಂದ ಆಚೆ ತರಲು ಈ ರೀತಿಯ ಶಿಬಿರಗಳು ನೆರವಾಗುತ್ತವೆ ಎಂದರು.

ರಾಜಮಹಾರಾಜರ ಕಾಲದಿಂದಲೂ ಮೆಸೂರು ಯೋಗಕ್ಕೆ ಪ್ರಸಿದ್ಧಿಯಾದ ನಗರವಾಗಿದೆ. ದೇಶ, ವಿದೇಶಗಳಿಂದ ಯೋಗ ಕಲಿಕೆಗೆ ಮೆಸೂರಿಗೆ ನೂರಾರು ಜನರು ಬರುತ್ತಿದ್ದಾರೆ. ಮಕ್ಕಳಿಗೆ ಯೋಗ ಕಲಿಸಿದರೆ ಏಕಾಗ್ರತೆ ಸಾಧ್ಯವಾಗುತ್ತದೆ. ಜತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಹೇಳಿದರು.

ಪರಮಹಂಸ ಯೋಗ ಮಹಾವಿದ್ಯಾಲಯದ ಅಧ್ಯಕ್ಷ ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಯೋಗ ಒಕ್ಕೂಟದ ಉಪಾಧ್ಯಕ್ಷ ರಮೇಶ್ ಕುಮಾರ್, ಯೋಗ ತರಬೇತುದಾರ ಎಚ್.ಎಂ. ರವಾಣಿಕರ್,

ಯೋಗ ಶಿಕ್ಷಕ ತರಬೇತಿ ಕೋರ್ಸ್ ಪಡೆದ ರಾಣಿ, ಎಚ್. ನಾಗರಾಜಪ್ಪ, ಎಚ್.ಎನ್. ಪ್ರಸಾದ್, ಎಲ್. ಜಗದೀಶ್, ಎಸ್. ರವಿಶಂಕರ್, ಎ.ಎಸ್. ರಕ್ಷಿತಾ, ಎ.ಎಂ. ಸೌಮ್ಯಾ, ಎಂ.ಎಸ್. ಮರುಳೀಧರ್, ಟಿ.ಯು. ಕಾವ್ಯಾ, ಜಿ.ಎನ್. ಸುವರ್ಣ ಅವರಿಗೆ ಯೋಗಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ರಾಣಿ ಅವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net