

ಶ್ರೀರಂಗಪಟ್ಟಣ: ಬೇಸಿಗೆ ಶಿಬಿರಗಳು ಮಕ್ಕಳನ್ನು ಶೈಕ್ಷಣಿಕ ಒತ್ತಡದಿಂದ ಹೊರತಂದು ಕ್ರಿಯಾಶೀಲ ಮತ್ತು ಸೃಜನಶೀಲರನ್ನಾಗಿಸುತ್ತವೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕ ಡಾ.ಎಂ. ನಂಜಯ್ಯ ಹೊಂಗನೂರು ಅಭಿಪ್ರಾಯಪಟ್ಟರು.
ತಾಲೂಕಿನ ಮಹದೇವಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಗಿನೊಳಗು ಬಳಗ ಮತ್ತು ಸಂಚಲನ ಮೈಸೂರು ಸಹಯೋಗದಲ್ಲಿ ಆಯೋಜಿಸಿರುವ 20 ದಿನಗಳ ಕುಣಿಯೋಣು ಬಾರಾ ಉಚಿತ ಬೇಸಿಗೆ ಶಿಬಿರವನ್ನು ಮಕ್ಕಳಿಗೆ ಸಂವಿಧಾನ ಓದು ಪುಸ್ತಕ ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜಾಗತೀಕರಣ, ನಗರೀಕರಣದಿಂದ ಮಕ್ಕಳು ದೇಸಿಯತೆಯಿಂದ ವಿಮುಖರಾಗುತ್ತಿದ್ದಾರೆ. ಟಿವಿ, ಸ್ಮಾರ್ಟ್ ಫೋನ್ ಮತ್ತು ರಿಯಾಲಿಟಿ ಶೋಗಳು ಮಕ್ಕಳನ್ನು ನೆಲದ ಸಂಸ್ಕೃತಿಯಿಂದಲೇ ದೂರ ಮಾಡುತ್ತಿವೆ ಎಂದು ವಿಷಾದಿಸಿದ ಅವರು, ಹಿಂದೆ ಮಕ್ಕಳು ಬೇಸಿಗೆ ರಜೆಯಲ್ಲಿ ಅಜ್ಜ-ಅಜ್ಜಿಯರ ಮನೆಗೆ ಹೋಗುತ್ತಿದ್ದರು. ಅಲ್ಲಿ ಬೆಟ್ಟ ಗುಡ್ಡ ಕಣಿವೆ, ಜರಿ ತೊರೆಗಳಲ್ಲಿ ಆಡಿ ಸುಂದರ ಅನುಭವ ತಮದಾಗಿಸಿಕೊಳ್ಳುತ್ತಿದ್ದರು. ಈ ಅನುಭವನ್ನು ಮಕ್ಕಳು ಕಳೆದುಕೊಂಡಿದ್ದಾರೆ. ಕಳೆದ 35 ವರ್ಷಗಳಿಂದ ನಗರ ಪ್ರದೇಶದಲ್ಲಿ ಬೇಸಿಗೆ ಶಿಬಿರಗಳು ನಡೆಯುತ್ತಿವೆ. ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಶಿಬಿರ ಆಯೋಜಿಸುತ್ತವೆ. ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಶಿಬಿರ ಆಯೋಜಿಸಿರುವುದು ಸಾರ್ಥಕ ಕಾರ್ಯ ಎಂದರು.
ಮೈಸೂರಿನ ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಹಿಂದ ಜವರಪ್ಪ ಮಾತನಾಡಿ, ಶಿಕ್ಷಣ ಖಾತರಿ ಇದೆ ಆದರೆ ಗುಣಮಟ್ಟದ ಶಿಕ್ಷಣದ ಖಾತರಿ ಇಲ್ಲವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಸೌಕರ್ಯವಿಲ್ಲ. ಖಾಸಗಿ ಕಾಲೇಜುಗಳು ವೈಭವಯುತವಾಗಿವೆ. ಪ್ರತಿಷ್ಠಿತ ಶಾಲೆಗಳಿಗೆ ಸೇರಿಸಲು ಪೈಪೋಟಿ ಅಪಾಯಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಮುಖಂಡ ಬಸವರಾಜು , ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಸವರಾಜು ಮಾತನಾಡಿದರು. ಮಹದೇವಪುರ ಗ್ರಾಪಂ ಉಪಾಧ್ಯಕ್ಷೆ ನಿಂಗಮ್ಮ, ಶಿಬಿರದ ನಿರ್ದೇಶಕ ದೀಪಕ್ ಮೈಸೂರು, ಕರುನಾಡ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಹೆಗ್ಗೂರು, ಶಿಬಿರದ ಸಂಚಾಲಕರಾದ ವಿ.ಅನಿಲ್‌ಕುಮಾರ್, ವಿನೋದ್ ಮಹದೇವಪುರ, ವಿ.ಮಧುಕುಮಾರ್, ಭಾವನ, ಮೈಸೂರಿನ ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್‌ನ ಪ್ರದೀಪ್, ಕುಸುಮಾ ಇದ್ದರು.