

ಕಿಕ್ಕೇರಿ: ಶಿಬಿರಗಳು ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸಲು ವೇದಿಕೆಗಳಿದ್ದು, ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಗ್ರಾಮೀಣ ಬೇಸಿಗೆ ಶಿಬಿರದಲ್ಲಿ ಈಚೆಗೆ ಭಾಗವಹಿಸಿ ಮಾತನಾಡಿ, ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ಸಿಇಒ ಕೆ.ಆರ್.ನಂದಿನಿ ಅವರ ವಿಶೇಷ ಕಾಳಜಿಯಿಂದ ಜರುಗುತ್ತಿರುವ ಬೇಸಿಗೆ ಶಿಬಿರಕ್ಕೆ ಭಾಗವಹಿಸಲು ಬಲು ಖುಷಿ ಇದೆ. ಬೇಸಿಗೆ ಶಿಬಿರಗಳು ನಗರ ಪ್ರದೇಶ ಹಾಗೂ ಶ್ರೀಮಂತ ಮಕ್ಕಳಿಗೆ ಮಾತ್ರ ಮೀಸಲಾಗಿತ್ತು. ಬಡ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲು ಸರ್ಕಾರ ಆಯೋಜಿಸಿರುವ ಶಿಬಿರ ಬಲು ಉಪಯೋಗಿಯಾಗಿದೆ ಎಂದರು.
ಮಕ್ಕಳಲ್ಲಿರುವ ನೈಜ್ಯ ಪ್ರತಿಭೆಗೆ ಒತ್ತು ನೀಡಲು, ದೇಶಿಯ ಕ್ರೀಡೆ, ಜಾನಪದ, ಸಂಗೀತಾ, ನಾಟಕದಂತಹ ಹಲವು ಕಲೆಗಳನ್ನು ಮಕ್ಕಳಿಗೆ ಕಲಿಸುವ ಯೋಜನೆ ಸದ್ಭಳಕೆಯಾಗಬೇಕು. ಇಂದಿನ ಮಕ್ಕಳಿಗೆ ಜಾನಪದ ಸೊಗಡಿನ ಗಂಧವೇ ತಿಳಿದಿಲ್ಲ. ಲಗೋರಿ, ಕುಂಟೆಬಿಲ್ಲೆ, ಮಾರಕೋತಿ ಆಟ, ಚಿಣ್ಣಿದಾಂಡು, ಚೌಕಾಬಾರದಂತಹ ಆಟವೇ ತಿಳಿದಿಲ್ಲ. ಇಂತಹ ಕ್ರೀಡೆಗಳನ್ನು ಮೊದಲು ಮಕ್ಕಳಿಗೆ ಕಲಿಸಬೇಕಿದೆ. ಬಲು ಖುಷಿಯ ಜತೆಗೆೆ ಮಕ್ಕಳ ಮನಸ್ಸಿಗೆ ಉಲ್ಲಾಸವಾಗಲಿದೆ. ಮುಂದಿನ ದಿನದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳು ಹಾಜರಾಗಲು ಸಹಕಾರಿಯಾಗಲಿದೆ ಎಂದು ನುಡಿದರು.
ಸರ್ಕಾರದ ಶಿಬಿರದಲ್ಲಿ ಮಕ್ಕಳಿಗೆ ಸುಗಮ ಸಂಗೀತ ಪರಿಚಯ, ಕಿಕ್ಕೇರಿಯ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಪರಿಚಯ ಹಾಗೂ ಇವರ ಗೀತೆಗಳನ್ನು ಹಾಡಿಸುವುದು, ಇಡೀ ರಾಜ್ಯದಲ್ಲಿ ಕೆ.ಎಸ್.ನ ಗೀತೆ ಮೆರೆಸಿ, ಎಲ್ಲರ ಮನದಲ್ಲಿ ಉಳಿಸಬೇಕು ಎಂಬ ಆಸೆ ಇದೆ. ಮಕ್ಕಳಿಗೆ ಸ್ಥಳೀಯ ಇತಿಹಾಸ, ಸಂಸ್ಕೃತಿ, ಆಚಾರ, ವಿಚಾರ, ಸೊಗಡಿನ ಪರಿಚಯ ಮಾಡಿಕೊಡಲು ಶಿಬಿರದ ಮುಖ್ಯಸ್ಥರು ಮುಂದಾಗಬೇಕು ಎಂದು ಹೇಳಿದರು.
ಮಕ್ಕಳಿಗೆ ನಾವು ಭಾರತೀಯರು ನಾವು ಭಾರತೀಯರು, ಕಟ್ಟೋಣ ನಾಡನು ಕಟ್ಟೋಣ ಭಾರತೀಯರೆಲ್ಲರೂ ಒಂದುಗೂಡಿ ಹಾಡುವಾ, ಎಲೆಗಳು ನೂರಾರು ಭಾವದ ಎಳೆಗಳು ನೂರಾರು, ಮೊಳಗಲಿ ಮೊಳಗಲಿ ನಾಡ ಗೀತವೂ, ಎದ್ದೇಳಿ ಯೋಧರೆ ಸನ್ನದ್ಧರಾಗಿ ಮತ್ತಿತರ ಗೀತೆಗಳನ್ನು ಹೇಳಿಕೊಟ್ಟು, ಮಕ್ಕಳೊಂದಿಗೆ ಹಾಡಿ ಖುಷಿಪಡಿಸಿದರು.
ಕರವೇ ಜಿಲ್ಲಾಧ್ಯಕ್ಷ ಸಾಸಲು ಗುರುಮೂರ್ತಿ ಮಕ್ಕಳಿಗೆ ಲೇಖನಿ, ಸಿಹಿ ತಿನಿಸು ನೀಡಿ ಕನ್ನಡ ಭಾಷೆ ಉಳಿವಿಗೆ ಮಕ್ಕಳು ಸ್ಪಷ್ಟವಾಗಿ ಕನ್ನಡ ಮೊದಲು ಓದಿ ಬರೆಯಲು ಕಲಿಯಿರಿ ಎಂದು ಉತ್ತೇಜಿಸಿದರು. ಗ್ರಂಥಪಾಲಕ ಲೋಕೇಶ್, ಶಿಬಿರದ ಮೇಲ್ವಿಚಾರಕ ವಿಜಯ್ ಮತ್ತಿತರರಿದ್ದರು.