ಬೇಸಿಗೆ ಶಿಬಿರ ಉತ್ತಮ ಕಾರ್ಯಕ್ರಮ: ತಾಲೂಕು ಪಂಚಾಯಿತಿ ಇಒ ವೀಣಾ ಹೇಳಿಕೆ

Summer camp closing ceremony Mandya
Published on

ಮಂಡ್ಯ: ರಾಜ್ಯ ಸರ್ಕಾರ ಗ್ರಾಮೀಣ ಮಕ್ಕಳಿಗಾಗಿ ಬೇಸಿಗೆ ಶಿಬಿರ ರೂಪಿಸಿದ್ದು ಒಳ್ಳೆಯ ಯೋಜನೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ವೀಣಾ ಹೇಳಿದರು.

ತಾಲೂಕಿನ ಕೀಲಾರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ಯಶಸ್ವಿಯಾಗಿ ನಡೆದಿರುವುದು ಸಂತಸ ತಂದಿದೆ. ಬೇರೆ ಎಲ್ಲ ಜಿಲ್ಲೆಗಳಿಗಿಂತ ನಮ್ಮ ಜಿಲ್ಲೆಯಲ್ಲಿ 14,000 ಮಕ್ಕಳು ನೋಂದಣಿ ಮಾಡಿಕೊಂಡಿದ್ದು, ಮಂಡ್ಯ ತಾಲೂಕಿನಲ್ಲಿ 4000 ಮಕ್ಕಳು ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಕ್ಕೆ ನೋಂದಣಿಯಾಗಿದ್ದು ಬಹಳ ಸಂತೋಷ ಎಂದರು.

ನಗರ ಪ್ರದೇಶಗಳಲ್ಲಿ ಮಾತ್ರ ಬೇಸಿಗೆ ಶಿಬಿರ ಆಯೋಜಿಸುತ್ತಿದ್ದನ್ನು ಗಮನಿಸಿದ ರಾಜ್ಯಸರ್ಕಾರ, ಗ್ರಾಮೀಣ ಮಕ್ಕಳಿಗೂ ಅನುಕೂಲವಾಗುವಂತೆ ವಿಸ್ತರಿಸಿರುವುದು ತುಂಬಾ ಸಂತಸದ ವಿಷಯ. ಕೀಲಾರ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ಎಸ್‌ಡಿಎಂಸಿ ಸಹಯೋಗದೊಂದಿಗೆ ಬಹಳ ವಿಶಿಷ್ಟ ರೀತಿಯಲ್ಲಿ ಕಲೆ ಮತ್ತು ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಅತ್ಯುತ್ತಮವಾದ ತರಬೇತಿ ನೀಡಿ ಬಹಳ ವಿಜೃಂಭಣೆಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಆಯೋಜಿಸಿದ್ದು ಶ್ಲಾಘನೀಯ ಎಂದು ಹೇಳಿದರು.

ಕೀಲಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್.ಶಿವಶಂಕರ್ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಯೋಗ, ಧ್ಯಾನ, ಗಣಿತ, ಸಾಂಸ್ಕೃತಿಕ ನೃತ್ಯ, ಜನಪದ ಗೀತೆಗಳು, ಮೂಕಾಭಿನಯ, ಗ್ರಾಮೀಣ ಕ್ರೀಡೆ, ಮೂಲ ಸಂಪ್ರದಾಯ, ಕ್ಷೇತ್ರ ಭೇಟಿ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಸಂಕೀರ್ಣ ಹೀಗೆ ಅನೇಕ ರೀತಿಯ ವಿವಿಧ ಚಟುವಟಿಕೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಬೇಸಿಗೆ ಶಿಬಿರಕ್ಕೆ ಒಂದು ಹೆಸರು ತಂದುಕೊಟ್ಟಂತಾಗಿತ್ತು ಎಂದು ಶ್ಲಾಘಿಸಿದರು.

ಗ್ರಾಪಂ ಉಪಾಧ್ಯಕ್ಷೆ ಪೂರ್ಣಿಮಾ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಶಿಕ್ಷಕ ರಾಜು, ಹಾಸ್ಯನಟ ವಿನೋದ್ ಗೊಬ್ಬರಗಾಲ, ಡಾ.ಮುರಳಿ, ದೇವಾನಂದ ವರಪ್ರಸಾರ್, ವಿಜಿ ಕೀಲಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net