ಉಮ್ಮಡಹಳ್ಳಿ ಸರ್ಕಾರಿ ಶಾಲೆಯಲ್ಲಿ ಉಚಿತ ಬೇಸಿಗೆ ಶಿಬಿರ: ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಗಣ್ಯರು

Summer camp at Ummadahalli Govt School Mandya
Published on

ಮಂಡ್ಯ: ಖಾಸಗಿ ಶಾಲೆ ಅಥವಾ ಸಂಸ್ಥೆಗಳಿಗೆ ಮೀಸಲಾಗಿದ್ದ ಬೇಸಿಗೆ ಶಿಬಿರ ಸರ್ಕಾರಿ ಶಾಲೆಯಲ್ಲಿಯೂ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಈ ನಿಟ್ಟಿನಲ್ಲಿ ಆಯೋಜಕರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಮೇಗೌಡ ಹೇಳಿದರು.

ತಾಲೂಕಿನ ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಬೇಸಿಗೆ ಶಿಬಿರದ ಅವಕಾಶ ಖಾಸಗಿ ಶಾಲೆಯ ಮಕ್ಕಳಿಗೆ ಮಾತ್ರ ದೊರಕುತ್ತಿತ್ತು. ಆದರೆ ಉಮ್ಮಡಹಳ್ಳಿ ಪ್ರೌಢಶಾಲೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಈ ಸೌಲಭ್ಯಗಳನ್ನು ಕಲ್ಪಿಸಿರುವುದು ರಾಜ್ಯದಲ್ಲಿ ವಿರಳ. ಈ ಶಿಬಿರಕ್ಕೆ ಪ್ರತಿಷ್ಠಿತ ಖಾಸಗಿ ಶಾಲೆಯ ಮಕ್ಕಳು ಕೂಡ ಭಾಗವಹಿಸುತ್ತಿದ್ದಾರೆ. ಶಾಲೆಯ ಈ ಕಾರ್ಯ ಇಲಾಖೆ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಉಚಿತವಾಗಿ ಪ್ರತಿದಿನ ಬೆಳಗ್ಗೆಯಿಂದ ಸ್ಪೋಕನ್ ಇಂಗ್ಲೀಷ್, ಚೆಸ್, ಅಬಾಕಸ್, ಚಿತ್ರಕಲೆ, ಕರಾಟೆ, ಈಜು, ಅರ್ಚರಿ, ಸಂಗೀತ, ಗ್ರಾಮೀಣಾ ಕ್ರೀಡೆಗಳು ಸೇರಿದಂತೆ ಹಲವು ಚಟುವಟಿಕೆಗೆ ನಡೆಯುತ್ತಿದೆ. ನಗರ ಪ್ರದೇಶದ ಮತ್ತು ಖಾಸಗಿ ಶಾಲೆಯ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗೆ ಆಶಾದಾಯಕ ಬೆಳವಣಿಗೆ ಎಂದು ಅಭಿಪ್ರಾಯಿಸಿದರು.

ಬಿಇಒ ಮಹದೇವ, ಅಕ್ಷರ ದಾಸೋಹ ಅಧಿಕಾರಿಗಳಾದ ಗಿರೀಶ್, ರಾಮಲಿಂಗಯ್ಯ, ಬಿಆರ್‌ಸಿ ಉಮೇಶ್, ಪಿಡಿಒ ಮಂಜುನಾಥ್, ಮುಖ್ಯಶಿಕ್ಷಕ ನಾಗರಾಜು, ಸಂಪನ್ಮೂಲ ವ್ಯಕ್ತಿ ಚೆಸ್ ಮಾಸ್ಟರ್ ರಾಘವೇಂದ್ರ, ಡಿಜಿಟಲ್ ಗ್ರಂಥಾಲಯದ ಸಹಾಯಕ ಯೋಗೇಶ್, ಜಾನಪದ ಗಾಯಕ ರಾಮಯ್ಯ ಇತರರಿದ್ದರು.

ಶಿಬಿರಕ್ಕೆ 125ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದಾರೆ. ಎರಡನೇ ವರ್ಷವೂ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗುತ್ತಿದ್ದು, ಶಾಲೆ ಆಡಳಿತ ಮಂಡಳಿ ಹಾಗೂ ಗ್ರಾಪಂನ ಆಯೋಜನೆಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಏ.24ರವರೆಗೆ ಆರರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಶಿಬಿರ ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net