

ಉಡುಪಿ: ವಿದ್ಯಾರ್ಥಿಗಳು ಅಂಕ ಗಳಿಸುವುದರೊಂದಿಗೆ ಸಂಸ್ಕಾರವನ್ನು ಪಡೆದುಕೊಂಡಾಗ ಶಿಕ್ಷಣಕ್ಕೆ ಮೌಲ್ಯ ಬರುತ್ತದೆ. ಸಂಸ್ಕಾರವ0ತ ವಿದ್ಯಾರ್ಥಿಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ತಿಳಿಸಿದರು.
ಶ್ರೀವಿಬುಧೇಶತೀರ್ಥ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕುಡಿಬೈಲು, ಕುಚ್ಚೂರು ಶಾಂತಿನಿಕೇತನ ಯುವ ವೃಂದದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಹೆತ್ತವರನ್ನು ಗೌರವಿಸುವ ನಿತ್ಯಪರಿಪಾಠ ನಮ್ಮದಾಗಬೇಕು. ಎಲ್ಲರೂ ಅಂಕಗಳಿಗೆ ಶಿಕ್ಷರನ್ನು ಗೌರವಿಸುತ್ತಾರೆ ಆದರೆ ಮೌಲ್ಯಯುತ ವಿಚಾರಗಳನ್ನು ಅರಿತು ಸಂಸ್ಕಾರವ0ತರಾಗಿ ಗೌರವಿಸುವುದು ಅಗತ್ಯವಿದೆ ಎಂದು ಸ್ವಾಮೀಜಿ ಹೇಳಿದರು. ಶಾಂತಿನಿಕೇತನದ ಸಂಸ್ಥಾಪಕ ರಾಜೇಶ್ ಮಾತನಾಡಿದರು. ಶಿಬಿರದ ವ್ಯವಸ್ಥಾಪಕ ಗೋವಿಂದರಾಜು ಶಿಬಿರದ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ, ನೀತಿ ಕಥೆಗಳ ಪುಸ್ತಕ ನೀಡಲಾಯಿತು. ಸಂಪನ್ಮೂಲ ವ್ಯಕ್ತಿ ಓಂ ಪ್ರಕಾಶ ಭಟ್ ಕಾರ್ಯಕ್ರಮ ನಿರೂಪಿಸಿದರು.