

ವಿಜಯವಾಣಿ ಸುದ್ದಿಜಾಲ ಕೊಕ್ಕಡ
ರಾಮಾಯಣ ಮಹಾಭಾರತದಂತಹ ಮೂಲಸಂಗತಿಗಳನ್ನು ಮಕ್ಕಳಿಗೆ ತಿಳಿಸದೆ ಹೋದಲ್ಲಿ ಭವಿಷ್ಯ ಬರಡಾದಿತು. ಈ ವಿಚಾರ ತಿಳಿಸಿದಾಗ ಮಾತ್ರ ಮೂಲ ಸಂಸ್ಕೃತಿಗಳನ್ನು ಉಳಿಸಿಕೊಂಡು ಹೋಗಲು ಸಾಧ್ಯ ಎಂದು ಸುಳ್ಯ ಕೆವಿಜಿ ಡೆಂಟಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಮನೋಜ್ ಹೇಳಿದರು.
ಕೊಕ್ಕಡ ಸೇವಾ ಮಂದಿರದಲ್ಲಿ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ ಹಾಗೂ ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಸಹಯೋಗದಲ್ಲಿ ಐದರಿಂದ ಒಂಬತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬೆಳ್ತಂಗಡಿ ಸಂಸ್ಕಾರ ಭಾರತಿಯ ಅಧ್ಯಕ್ಷ ಸಂಪತ್ ಸುವರ್ಣ ಸಮಾರೋಪ ಭಾಷಣ ಮಾಡಿದರು. ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಕುಶಾಲಪ್ಪ ಗೌಡ ಪೂವಾಜೆ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶ್ರೀರಾಮ ವಿದ್ಯಾಸಂಸ್ಥೆ ಶಿಕ್ಷಕ- ಶಿಕ್ಷಕಿಯರನ್ನು ಗೌರವಿಸಲಾಯಿತು. ಐದು ದಿನಗಳ ಕಾಲ ನಡೆದ ಶಿಬಿರದ ಸಂಚಾಲಕರಾಗಿ ಸ್ವಾತಿ ಕೆ.ವಿ., ಸುಪ್ರೀತಾ ಎ., ಶ್ವೇತಾ ಕುಮಾರಿ ಎಂ.ಪಿ., ಭವ್ಯಾ ಪಿ.ಡಿ., ಶುಭಲಕ್ಷ್ಮೀ ಜವಾಬ್ದಾರಿ ನಿರ್ವಹಿಸಿದರು.
ಶ್ರೀ ರಾಮ ಸೇವಾ ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ನೈಮಿಷ ಸ್ವಾಗತಿಸಿದರು. ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಹಿಟ್ಟಿಲು ಪ್ರಸ್ತಾವನೆಗೈದರು. ಶಿಬಿರಾರ್ಥಿ ಯೋಕ್ಷಾ ವೈಯಕ್ತಿಕ ಗೀತೆ ಹಾಡಿದರು. ಕೇಶವ ಹಳ್ಳಿಂಗೇರಿ ನಿರೂಪಿಸಿದರು. ಮುಖ್ಯಶಿಕ್ಷಕ ಚಂದ್ರಶೇಖರ ಶೇಟ್ ವಂದಿಸಿದರು.