

ಮಡಿಕೇರಿ:
ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ವಿಚಿತ್ರ ಹವಾಮಾನ ಕಾಣಿಸಿಕೊಳ್ಳುತ್ತಿದೆ. ಬೆಳಗ್ಗೆ ಕೊರೆಯುವ ಚಳಿ ಇದ್ದರೆ ೧೦ ಗಂಟೆಯ ನಂತರ ಸೂರ್ಯ ಮೈ ಸುಡಲಾರಂಭಿಸುತ್ತಾನೆ. ಈಗ ಕನಿಷ್ಠ ತಾಪಮಾನ ೧೩ ಡಿಗ್ರಿಯಷ್ಟು ಇದ್ದರೆ, ಗರಿಷ್ಟ ಉಷ್ಣಾಂಶ ಸುಮಾರು ೩೩ ಡಿಗ್ರಿ ಸೆಂಟಿಗ್ರೇಡ್‌ನಷ್ಟು ಕಂಡು ಬರುತ್ತಿದೆ. ಇನ್ನು ೨,೩ ದಿನಗಳಲ್ಲಿ ಮಳೆ ಬರುವ ಸಾಧ್ಯತೆ ಇದ್ದು, ಅಲ್ಲಿಯ ತನಕ ಇದೇ ಸ್ಥಿತಿ ಮುಂದುವರಿಯಲಿದೆ ಎನ್ನುತ್ತಾರೆ ಹವಾಮಾನ ತಜ್ಞರು.
ಸಾಮಾನ್ಯವಾಗಿ ಬೇಸಿಗೆಯಲ್ಲೂ ’ಏರ್ ಕಂಡೀಷನ್ಡ್’ ಸ್ಥಿತಿಯಲ್ಲೇ ಇರುತ್ತಿದ್ದ ಕೊಡಗು ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರಿತ್ಯದ ಪರಿಣಾಮವೋ ಎಂಬಂತೆ ತಾಪ ಹೆಚ್ಚಿಸಿಕೊಳ್ಳುತ್ತಿದೆ. ಈ ವರ್ಷದ ಅತ್ಯಧಿಕ ಉಷ್ಣಾಂಶ ೩೩.೧ ಡಿಗ್ರಿ ಸೆಲ್ಸಿಯಸ್ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಗಾಗಲೇ ದಾಖಲಾಗಿದೆ. ಕಳೆದ ೩,೪ ವರ್ಷಗಳಿಂದ ಮಾರ್ಚ್ ಕಾಲಿಡುತ್ತಿದ್ದಂತೆಯೇ ಜಿಲ್ಲೆಯಲ್ಲಿ ಈ ರೀತಿಯ ವಾತಾವರಣ ಕಂಡು ಬರುತ್ತಿರುವುದು ಸ್ಥಳಿಯರನ್ನು ಕಂಗೆಡಿಸಿದೆ.
ಹಾಸನ ಮತ್ತು ಮೈಸೂರು ಗಡಿಭಾಗದಲ್ಲಿರುವ ಜಿಲ್ಲೆಯ ಊರುಗಳಲ್ಲಿ ಗರಿಷ್ಟ ತಾಪಮಾನ ಈಗಾಗಲೇ ೩೩ ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇದೆ. ದಕ್ಷಿಣ ಕನ್ನಡದ ಗಡಿ ಮತ್ತು ಕೇರಳದ ಕಾಸರಗೋಡಿಗೆ ಹೊಂದಿಕೊಂಡಂತಿರುವ ಕರಿಕೆ ಮತ್ತಿತರ ಭಾಗಗಳಲ್ಲೂ ಬಿಸಿಲಿನ ತಾಪ ಬೆವರು ಹರಿಸುತ್ತಿದೆ. ಈ ಪ್ರದೇಶಗಳಿಗೆ ಹೋಲಿಸಿದರೆ ಮಡಿಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಷ್ಣಾಂಶ ಕಡಿಮೆ ಇದ್ದರೂ ’ಅಬ್ಬಬ್ಬಾ ಏನು ಸೆಖೆಯಪ್ಪ…! ಎಂದು ಉದ್ಘರಿಸುವಷ್ಟು’ ಬೇಸಿಗೆಯ ಬಿಸಿ ಅನುಭವ ಇಲ್ಲಿ ಆಗುತ್ತಿದೆ.
ಈ ತಿಂಗಳ ೧೫ರ ನಂತರ ೨,೩ ದಿನ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆ ಆಗಬಹುದಾದ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ. ಆದರೂ ಹಗಲಿನಲ್ಲಿ ಬಿಸಿಲಿನ ತಾಪ ಇನ್ನೂ ಒಂದು ವಾರ ಹೀಗೆಯೇ ಮುಂದುವರಿಯಬಹುದು. ಮಳೆಯ ನಂತರ ಕೆಲವಡೆ ತಾಪಮಾನ ಸ್ವಲ್ಪ ಇಳಿಕೆ ಆದರೂ ಏಪ್ರಿಲ್‌ನಲ್ಲಿ ಮತ್ತೆ ಸೆಕೆ ಹೆಚ್ಚಾಗಲಿದೆ ಎನ್ನುವ ಮಾಹಿತಿ ಕೊಡುತ್ತಾರೆ ಹವಾಮಾನ ತಜ್ಞರು.
ಮುಂದಿನ ವರ್ಷಕ್ಕೆ ಫಸಲು ಬೇಕು ಎಂದರೆ ಈಗ ಕಾಫಿ ಗಿಡಗಳಿಗೆ ಮಳೆಯ ಅಗತ್ಯವಿದೆ. ಆದರೆ ಅಂತಹ ಯಾವುದೇ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲವಾದ ಕಾರಣ ಕಾಫಿ ಬೆಳೆಗಾರರು ತುಂತುರು ನೀರಾವರಿಯ ಮೊರೆ ಹೋಗಿರುವುದು ಅಲ್ಲಲ್ಲಿ ಕಾಣಬಹುದಾಗಿದೆ. ಈ ವ್ಯವಸ್ಥೆ ಇಲ್ಲದವರು ಆಕಾಶದ ಕಡೆಗೆ ಮುಖ ಮಾಡಿದ್ದಾರೆ.
ಬೇಸಿಗೆಯಲ್ಲಿ ರೋಗಾಣುಗಳು ಹೆಚ್ಚು ಕ್ರಿಯಾಶೀಲವಾಗಿದ್ದು, ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚು. ಹಾಗಾಗಿ ಮಕ್ಕಳು, ವಯಸ್ಸಾದವರ ಬಗ್ಗೆ ಜಾಗತಿ ಅಗತ್ಯ ಎನ್ನುತ್ತಾರೆ ವೈದ್ಯರು. ಸಾಂಕ್ರಾಮಿಕ ರೋಗಗಳ ಹಾವಳಿಯೂ ಈ ಸಂದರ್ಭದಲ್ಲಿ ಜಾಸ್ತಿ. ಕಾಲರಾ, ಟೈಫಾಯ್ಡ, ಕಣ್ಣಿನ ತೊಂದರೆಗಳು, ಚಿಕನ್ ಫಾಕ್ಸ್, ಚರ್ಮ ಸಮಸ್ಯೆಗಳು, ವಾಂತಿ ಭೇದಿ, ನಿರ್ಜಲೀಕರಣ ಮತ್ತಿತರ ಸಮಸ್ಯೆಗಳು ಕಂಡುಬರುವುದರಿಂದ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ ಎನ್ನುವುದು ವೈದ್ಯರ ಸಲಹೆ.
ಏನು ಮಾಡಬೇಕು ?