ಸುಮಿತ್ರಾ ನಾಯಕ್ ಉಡುಪಿ ನಗರಸಭೆ ಅಧ್ಯಕ್ಷೆ

nagara sabhe new
Published on

ಉಡುಪಿ: ಉಡುಪಿ ನಗರಸಭೆಯ ಅಧ್ಯಕ್ಷೆಯಾಗಿ ಪರ್ಕಳ ವಾರ್ಡ್‌ನ ಸದಸ್ಯೆ ಸುಮಿತ್ರಾ ಆರ್. ನಾಯಕ್ ಹಾಗೂ ಉಪಾಧ್ಯಕ್ಷೆಯಾಗಿ ಮಲ್ಪೆ ಕೊಳ ವಾರ್ಡ್ ಸದಸ್ಯೆ ಲಕ್ಷ್ಮೀ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆ(ಎ) ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾಗಿದ್ದು, ಗುರುವಾರ ನಗರಸಭೆ ಕಚೇರಿಯಲ್ಲಿ ಕುಂದಾಪುರ ಸಹಾಯಕ ಆಯುಕ್ತ ರಾಜು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ನಗರಸಭೆಯ 35 ವಾರ್ಡ್‌ಗಳ ಪೈಕಿ ಬಿಜೆಪಿ 31ರಲ್ಲಿ ಜಯ ಗಳಿಸಿದೆ. 4 ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಬಿಜೆಪಿಯಲ್ಲಿ ಹಿರಿತನ ಆಧಾರದಲ್ಲಿ ಸುಮಿತ್ರಾ ನಾಯಕ್ ಅವರಿಗೆ ಮಣೆ ಹಾಕಲಾಗಿದೆ. ಸದಸ್ಯರಾದ ಗೀತಾ ಶೇಟ್ ಮತ್ತು ಎಡ್ಲಿನ್ ಕರ್ಕಡ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದವರು. ಉಳಿದಂತೆ ಎಲ್ಲ ಬಿಜೆಪಿ ಸದಸ್ಯರು ಮೊದಲ ಬಾರಿ ಸದಸ್ಯರಾಗಿ ಆಯ್ಕೆಯಾದವರು.

ಶಾಸಕ ಕೆ. ರಘುಪತಿ ಭಟ್, ಸದಸ್ಯರಾದ ಪ್ರಭಾಕರ ಪೂಜಾರಿ, ರಮೇಶ್ ಕಾಂಚನ್, ವಿಜಯ್ ಕೊಡವೂರು, ಶ್ರೀಕೃಷ್ಣ ರಾವ್ ಕೊಡಂಚ, ಅಮೃತಾ ಕೃಷ್ಣಮೂರ್ತಿ, ಯೋಗೀಶ್ ಸಾಲ್ಯಾನ್ ಅಭಿನಂದನಾ ಮಾತನ್ನಾಡಿದರು.

ಪೌರಾಯುಕ್ತ ಆನಂದ ಕಲ್ಲೋಳಿಕರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ದ.ಕ. ಮತ್ತು ಉಡುಪಿ ಮೀನುಗಾರರ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಉಪಸ್ಥಿತರಿದ್ದರು.

ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತಕ್ಕೆ ಹೆಚ್ಚಿನ ಗಮನ ನೀಡಲಾಗುವುದು. ಪ್ಲಾಸ್ಟಿಕ್ ಮುಕ್ತ ನಗರಸಭಾ ಮಾಡುವ ಗುರಿ ಹೊಂದಲಾಗಿದೆ. ದಾರಿದೀಪ, ಸ್ವಚ್ಛತೆ, ನೀರಿನ ಸೌಲಭ್ಯ ಕಲ್ಪಿಸುವುದಕ್ಕೆ ಮೊದಲ ಆದ್ಯತೆ. ಸಾರ್ವಜನಿಕರ ಸಮಸ್ಯೆಗೆ ಶೀಘ್ರ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ಸಾರ್ವಜನಿಕ ಭೇಟಿಗೆ ಸಮಯವನ್ನೂ ನಿಗದಿಪಡಿಸಲಾಗುವುದು. ಯಾವುದೇ ಸನ್ಮಾನ, ಸಮಾರಂಭಗಳಿಗೆ ಆಸ್ಪದ ನೀಡದೆ ತ್ವರಿತಗತಿಯಲ್ಲಿ ಮಾದರಿ ನಗರಸಭೆಯನ್ನಾಗಿ ರೂಪಿಸಲು ಯೋಜನೆ ಸಿದ್ಧಪಡಿಸಲಾಗುವುದು.

ಸುಮಿತ್ರಾ ಆರ್. ನಾಯಕ್, ನೂತನ ಅಧ್ಯಕ್ಷೆ, ಉಡುಪಿ ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net