ಸುವರ್ಣ ಸಂಭ್ರಮದಲ್ಲಿರುವ ಸುಮಂಗಲಿ ಸೇವಾಶ್ರಮ; ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ

s s
Published on

ಬೆಂಗಳೂರು: ದುರ್ಬಲರಿಗೆ ಆಶ್ರಯ ಮತ್ತು ಬಲವನ್ನು ನೀಡಲು ಕಳೆದ 50 ವರ್ಷಗಳ ಹಿಂದೆ ಸ್ಥಾಪನೆಯಾದ ಸುಮಂಗಲಿ ಸೇವಾಶ್ರಮಕ್ಕೆ ಸದ್ಯ ಸುವರ್ಣ ಮಹೋತ್ಸವದ ಸಂಭ್ರಮ. ಹೆಬ್ಬಾಳ ಸಮೀಪ ಚೋಳನಾಯಕನಹಳ್ಳಿಯಲ್ಲಿ ಡಾ.ಎಸ್.ಜಿ.ಸುಶೀಲಮ್ಮ ಮತ್ತು ಎಂ.ಕಾಂತಮ್ಮ ಎಂಬ ಮಹಿಳೆಯರ ದೂರದೃಷ್ಟಿಯಂತೆ ಕೇವಲ ಹುಲ್ಲಿನ ಗುಡಿಸಲಿನಲ್ಲಿ 1975ರಲ್ಲಿ ಸ್ಥಾಪನೆಯಾದ ಸಂಸ್ಥೆ ಸುಮಂಗಲಿ ಸೇವಾಶ್ರಮ.

ಅವಶ್ಯಕತೆ ಇರುವ ಅರ್ಹರಿಗೆ ವಿವಿಧ ಸೌಲಭ್ಯ ಮತ್ತು ಸೇವೆಯನ್ನೊದಗಿಸಬೇಕೆಂಬ ಉದಾತ್ತ ಆಶಯದೊಂದಿಗೆ ಆರಂಭವಾದ ಸಂಸ್ಥೆಯು ತನ್ನ ಹತ್ತು ಹಲವು ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನ ಮಾಡುತ್ತಾ, ನೂರಾರು ಗಣ್ಯ ಮಾನ್ಯರ ಸಲಹೆ, ಸೂಚನೆಗಳನ್ನು ಪಡೆದು, ಸಾವಿರಾರು ಜನರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ.

ನರ್ಸರಿ ಮತ್ತು ಹೈಯರ್ ಪ್ರೈಮರಿ ಶಾಲೆಗಳನ್ನು ನಡೆಸುತ್ತಿರುವ ಸಂಸ್ಥೆಯಲ್ಲಿ ಚಿಂದಿ ಆಯುವ ಮಕ್ಕಳ ಶಿಕ್ಷಣಕ್ಕಾಗಿಯೇ ತೆರೆದ ಶಿಶುವಿಹಾರ ಮಹತ್ವದ ಮೈಲುಗಲ್ಲು. ಮಕ್ಕಳ ರಕ್ಷಣೆ, ಶಿಕ್ಷಣ, ತರಬೇತಿ, ಬೇಸಿಗೆ ಶಿಬಿರ, ಉನ್ನತ ವ್ಯಾಸಂಗಕ್ಕೆ ಸಹಕಾರ, ಗ್ರಂಥಾಲಯ, ಖಿನ್ನತೆಗೊಳಗಾದ ಮಕ್ಕಳ ಕೌನ್ಸೆಲಿಂಗ್ ಹೀಗೆ ಮಕ್ಕಳ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದೆ. ಅಬಲೆಯರು ಮತ್ತು ನಿರಾಶ್ರಿತರಿಗಾಗಿ ತೆರೆದ ಸೌಹಾರ್ದ ಆಶ್ರಯಧಾಮ, ಅನಾಥ ಮಕ್ಕಳ ಪ್ರೇಮಾನಂದ ಮಕ್ಕಳ ಕುಟೀರ, ವೃದ್ಧರಿಗಾಗಿ ಪುಣ್ಯಕೋಟಿ ವಾನಪ್ರಸ್ಥಾಶ್ರಮ ಆಯಾ ವರ್ಗದವರಿಗೆ ವಿಶಿಷ್ಟ ಸೇವೆ ಒದಗಿಸುತ್ತಿದೆ.

ಸ್ವಯಂ ಸೇವಾ ಸಂಸ್ಥೆಗಳ ಸ್ಥಾಪನೆಯ ಮೂಲಕ ಮಹಿಳೆಯರಿಗೆ ತರಬೇತಿ, ಸಂವಾದ, ಸಂಹವನಗಳ ಮೂಲಕ ಮಾಹಿತಿಯನ್ನು ನೀಡಿ ಗುಡಿಕೈಗಾರಿಕೆ ಹಾಗೂ ಸ್ವಉದ್ಯೋಗದಲ್ಲಿ ತೊಡಗುವಂತೆ ಮಾಡಿದ್ದಾರೆ.

ಆಶ್ರಮ ಮತ್ತು ಸುತ್ತಮುತ್ತಲ ಜನರಿಗೆ ಆರೋಗ್ಯದ ಅರಿವು ಮೂಡಿಸಲು ನಿರಂತರ ಶಿಬಿರಗಳನ್ನು ಏರ್ಪಡಿಸಿ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆ ದೊರಕಿಸಿ ಕೊಟ್ಟಿದ್ದಾರೆ. ನಿರಾಶ್ರಿತ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ನಿಲಯ ಸ್ಥಾಪನೆ. ಆಶ್ರಮದಲ್ಲಿರುವವರೆಲ್ಲರಿಗೂ ನಿತ್ಯ ದಾಸೋಹವನ್ನು ನೀಡುತ್ತಿರುವ ಸುಮಂಗಲಿ ಸೇವಾಶ್ರಮದಲ್ಲಿ ಸೀಜಾಗೃತಿ ಮಾಸಪತ್ರಿಕೆ, ಸಂಗೀತ, ನೃತ್ಯ ಹೀಗೆ ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಗೂ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗಿದೆ. ವೃಕ್ಷ ಮಹಾದಾಸೋಹ ಎಂಬ ಪರಿಕಲ್ಪನೆಯಲ್ಲಿ ಕೆರೆದಂಡೆ, ಖಾಲಿ ಜಾಗ, ಉದ್ಯಾನವನ, ಮಠ-ಮಂದಿರಗಳ ಆವರಣ ಹೀಗೆ ವಿವಿದೆಡೆ ಈ ವರೆಗೆ 50 ಸಾವಿರ ಸಸಿಗಳನ್ನು ನೆಟ್ಟು ಪೋಷಿಸಿದ್ದಾರೆ. ಇಂತಹ ಹಲವು ಸೇವಾ ಕಾರ್ಯಗಳ ಮೂಲಕ ಸಾರ್ಥಕತೆ ಮೆರೆದಿರುವ ಸುಮಂಗಲಿ ಸೇವಾಶ್ರಮದ ಸುವರ್ಣ ಸಂಭ್ರಮವು ಗುರುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ನಾಡಿನ ವಿವಿಧ ಮಠಾಧೀಶರು, ಗಣ್ಯರು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net