ರಂಗಭೂಮಿಯಲ್ಲಿ ರಾಜಕೀಯ ಬೆರೆಸುವುದು ಸಲ್ಲದು: ಬಸವಲಿಂಗಯ್ಯ

20230226_184651
Published on

ಉಡುಪಿ : ರಂಗಭೂಮಿ ಯಾವಾಗಲೂ ವ್ಯವಸ್ಥೆಯ ಪರ ಮತ್ತು ವಿರೋಧವಾಗಿರುತ್ತದೆ. ದೇಶವನ್ನು ಆಳುವವರ ಪರ ಹೆಚ್ಚು ಚಿಂತನೆ ಮಾಡಿದರೆ ನಾಟಕ ಭಜನೆಯಾಗುತ್ತದೆ. ರಂಗಭೂಮಿಯಲ್ಲಿ ರಾಜಕೀಯ ಬೆರೆಸುವುದು ಸಲದು. ಪ್ರಜಾಪ್ರಭುತ್ವದಲ್ಲಿ ವಿಮರ್ಶಕರೇ ಇರದಿದ್ದಾಗ ರಾಜಪ್ರಭುತ್ವಕ್ಕೆ ದಾರಿಯಾಗುತ್ತದೆ  ಬೆಂಗಳೂರು ಎನ್ ಎಸ್ ಡಿ ಮಾಜಿ ನಿರ್ದೇಶಕ ಶ್ರೀ ಬಸವಲಿಂಗಯ್ಯ ಹೇಳಿದರು.


ಅಜ್ಜರಕಾಡು ಬಯಲು ರಂಗ ಮಂದಿರದಲ್ಲಿ  ಸುಮನಸ ಕೊಡವೂರು ಆಯೋಜಿಸಿರುವ ರಂಗ ಹಬ್ಬಕ್ಕೆ ಮಡಕೆ ಒಡೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.


ನಾಟಕ ಕೆಲಸ ನೀತಿ ಬೋಧನೆಯಲ್ಲ. ಧರ್ಮ ಪ್ರಚಾರವು ಅಲ್ಲ. ಅದಕ್ಕಾಗಿ ಧರ್ಮಗುರುಗಳಿದ್ದಾರೆ. ರಂಗಭೂಮಿ ಸಮಾಜವನ್ನು ವಸ್ತುನಿಷ್ಠವಾಗಿ ತೋರಿಸುವ ಕೆಲಸ ಮಾಡಬೇಕು. ಸಮಾಜ ಸಂಕಷ್ಟದಲ್ಲಿದ್ದಾಗ ಪ್ರತಿರೋಧರಾಸ್ತ್ರ ನಾಟಕವಾಗಿದೆ. ಮಹಾಕಾವ್ಯಗಳ ಬಗ್ಗೆ ಪಾತ್ರಗಳನ್ನು ನಿರೂಪಿಸುವ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಯೂ ಯೋಚಿಸುವ ಅಗತ್ಯವಿದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಮೌಲ್ಯಗಳಿವೆ ಹೀಗಾಗಿ ಜನ ಈ ಪಾತ್ರಗಳನ್ನು ಮತ್ತೆ ಮತ್ತೆ ನೋಡುತ್ತಾರೆ ಎಂದರು.

ಇಂದಿನ ಶಿಕ್ಷಣ ಅರಿವು ವಿಸ್ತರಿಸುವಲ್ಲಿ ಸೋತಿದೆ. ಜ್ಞಾನ ಪ್ರಸಾರ ಮಾಡುತ್ತಿಲ್ಲ.  ವಿದ್ಯಾರ್ಥಿಗಳಿಗೆ ಮಾಹಿತಿ ತಲುಪಿಸುವ ಕೆಲಸ ಮಾತ್ರ ನಡೆಯುತ್ತಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉದ್ಯಮಿ ಆನಂದ  ಸುವರ್ಣ,  ಹರಿಯಪ್ಪ ಕೋಟ್ಯಾನ್, ದಿವಾಕರ ಸನಿಲ್, ಸುಮನಸ ಅಧ್ಯಕ್ಷ ಪ್ರಕಾಶ್ ಕೊಡವೂರು ಉಪಸ್ಥಿತರಿದ್ದರು. ಹಿರಿಯ ಕಲಾವಿದ ತೊನ್ಸೆ ವಿಜಯಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net