

ಉಡುಪಿ: ಸುಮನಸಾವು ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದಿದ್ದು, ರಾಜ್ಯದೆಲ್ಲೆಡೆ ಇಲ್ಲಿನ ಪ್ರತಿಭೆಗಳು ಬೆಳಗುತ್ತಿವೆ. ನಾಟಕಗಳ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಹರಡುವ ಕೆಲಸಗಳಾಗುತ್ತಿವೆ. ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬದ 45ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಬಯಲುರಂಗಮಂದಿರವನ್ನು ಸುಮನಸಾ ಸಂಸ್ಥೆ ಬಿಟ್ಟು ಬೇರೆಯವರು ಬಳಸದೇ ಇರುವುದು ಬೇಸರದ ಸಂಗತಿ ಎಂದು ತಿಳಿಸಿದರು.
ಉದ್ಯಮಿ ಅಚ್ಯುತ್ ಅಮೀನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ, ನಮ್ಮ ಸಂಸ್ಕೃತಿಯ ಪ್ರತಿಬಿಂಬವೇ ರಂಗಭೂಮಿ. ಅದರಂತೆ ಸುಮನಸಾ ಕಾರ್ಯನಿರ್ವಹಿಸುತ್ತಿದ್ದು, ಸಾಂಸ್ಕೃತಿಕ ಮಾತ್ರವಲ್ಲ, ಸಾಮಾಜಿಕ ಸಹಿತ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಸಮನ್ವಯ ಸರ್ವಧರ್ಮ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ ಮಾತನಾಡಿ, ಆಧುನಿಕ ಕಾಲದಲ್ಲಿ ಎಲ್ಲರ ಕೈಯಲ್ಲಿ ಮೊಬೈಲ್ ಇದೆ. ಎಲ್ಲವನ್ನೂ ಮೊಬೈಲ್‌ನಲ್ಲಿಯೇ ನೋಡುತ್ತಾರೆ. ಆದರೆ, ರಂಗಭೂಮಿ ನೀಡುವ ಸಂದೇಶ ಅವುಗಳಲ್ಲಿ ಸಿಗುವುದಿಲ್ಲ ಎಂದು ತಿಳಿಸಿದರು.
ಕಲಾವಿದ ಪಾಂಡುರಂಗ ಪ್ರಭು ಪರ್ಕಳ ಅವರಿಗೆ ರಂಗಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು. ಮಧುಕರ್ ಎಂಜಿನಿಯರಿಂಗ್ ವರ್ಕ್ಸ್ ಮಾಲೀಕ ಮಂಜುನಾಥ್ ಜತ್ತನ್, ಉದ್ಯಮಿ ಗುರುವ ಸುವರ್ಣ, ಉದ್ಯಮಿ ಮಹಾಬಲ ಸಾಲ್ಯಾನ್, ಪೌರಾಯುಕ್ತ ರಾಯಪ್ಪ, ರಾಷ್ಟ್ರೀಯ ಬಿಲ್ಲವ ಮಹಾಮಂಡಳ ಉಡುಪಿ ಅಧ್ಯಕ್ಷ ಚಂದ್ರಶೇಖರ ಕಾಪು, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಪ್ರವೀಣ್ ಜಿ. ಕೊಡವೂರು, ಹರೀಶ್ ಅಂಬಲಪಾಡಿ ಉಪಸ್ಥಿತರಿದ್ದರು. ನಾಗೇಶ್ ಸ್ವಾಗತಿಸಿದರು. ದಿವಾಕರ ಕಟೀಲು ವಂದಿಸಿದರು. ಪ್ರವೀಣ್‌ಚಂದ್ರ ಕಾರ್ಯಕ್ರಮ ನಿರೂಪಿಸಿದರು. 'ನಮ ತುಳುವೆರ್ ಸಂಘಟನೆ' ತಂಡದಿಂದ 'ಅಂಬೆ" ನಾಟಕ ಪ್ರದರ್ಶನಗೊಂಡಿತು.