

ವಿಜಯವಾಣಿ ಸುದ್ದಿಜಾಲ ಉಡುಪಿ
ಭೂತಾರಾಧನೆಯ ಒಳಗೂ ಕಲೆ ಇದೆ. ಅದನ್ನು ಹೆಕ್ಕಿ ತೆಗೆದು ರಂಗಕ್ಕೆ ತರುವ ಕೆಲಸವಾಗಬೇಕಿದೆ. ಅಮೃತ ಸೋಮೇಶ್ವರ ಅವರು ಭೂತಾರಾಧನೆಯ ಪಾಡ್ದನಗಳ ರಂಗಪ್ರಯೋಗ ನಡೆಸಿದ್ದರು. ಇದು ಜೇನುಗೂಡಿಗೆ ಕೈ ಹಾಕುವ ಕೆಲಸವೆಂದು ಗೊತ್ತು. ಆದರೂ ಸಂಪ್ರದಾಯಸ್ಥರು ಇದಕ್ಕೆ ಪ್ರೋತ್ಸಾಹ ನೀಡಬೇಕು. ಆಗಲೇ ತುಳು ನಾಡಿನ ಭೂತಾರಾಧನೆಯು ದೇಶದ ಗಡಿ ದಾಟಿ ಬೆಳೆಯಲು ಸಾಧ್ಯ ಎಂದು ಸೃಜನಶೀಲ ಸಾಹಿತಿ ಅರವಿಂದ್ ಮಾಲಗತ್ತಿ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಅಜ್ಜರಕಾಡು ಭುಜಂಗ ಪಾರ್ಕ್ನಲ್ಲಿರುವ ಬಯಲು ರಂಗ ಮಂದಿರದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಭಾನುವಾರ (ಫೆ.23) ರಾತ್ರಿ ಆಯೋಜಿಸಿದ್ದ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ 7 ದಿನ ನಡೆಯಲಿರುವ ರಂಗಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.
ರಂಗ ಸಾಧಕ ಗೀತಂ ಗಿರೀಶ್ ಅವರಿಗೆ ರಂಗಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸ್ಮರಣಿಕಾ ಉಡುಪಿ ಪ್ರವರ್ತಕ ದಿವಾಕರ್ ಸಾಲ್ಯಾನ್, ಸಾಯಿಬಾಬಾ ಮಂದಿರದ ಧರ್ಮದರ್ಶಿ ತೋಟದಮನೆ ದಿವಾಕರ್ ಶೆಟ್ಟಿ, ಸುಮನಸಾ ಕೊಡವೂರು ಸಂಚಾಲಕ ಭಾಸ್ಕರ್ ಪಾಲನ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ನಾಗೇಶ್ ಪ್ರಸಾದ್ ವಂದಿಸಿದರು. ಅಕ್ಷತ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶ್ರೀಜಿತ್ ನಿರ್ದೇಶನ ಹಾಗೂ ರಚನೆಯಲ್ಲಿ 'ಪಯಣ ಬೆಂಗಳೂರು' ತಂಡದ ಕಲಾವಿದರು ತಲ್ಕಿ ನಾಟಕ ಪ್ರದರ್ಶಿಸಿದರು. ಮಾ.1ರ ವರೆಗೂ ನಿತ್ಯ ಸಂಜೆ 6:30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ.
ಎಲ್ಲಿ ಮನುಷ್ಯತ್ವ, ಸೇವೆ, ತ್ಯಾಗದ ಭಾವ ಇರುತ್ತದೆಯೋ ಅಲ್ಲಿ ಕಲಾವಿದರು ಇರುತ್ತಾರೆ. ಅದಕ್ಕೆ ಸುಮನಸಾ ಕೊಡವೂರು ಸಂಸ್ಥೆಯೇ ಸಾಕ್ಷಿ. ಒಂದು ಮನೆಗೆ ಬೆಂಕಿ ಬಿದ್ದಾಗ ಅಲ್ಲಿ ಮತ್ತೆ ಮನೆ ನಿರ್ಮಿಸಿ ಕೊಡಲು ಸೇರಿದವರು ಕಟ್ಟಿದ ಸಂಸ್ಥೆಯಿದು. ಇತರೆಲ್ಲರಿಗಿಂತ ಕಲಾವಿದನಿಗೆ ಮಾತ್ರ ಇನ್ನೊಬ್ಬರ ಕಷ್ಟ, ದು:ಖ ಅರ್ಥವಾಗಲು ಸಾಧ್ಯ. | ಅರವಿಂದ್ ಮಾಲಗತ್ತಿ. ಸೃಜನಶೀಲ ಸಾಹಿತಿ