

ವಿಜಯವಾಣಿ ಸುದ್ದಿಜಾಲ ಉಡುಪಿ
ಟಿವಿ, ಮೊಬೈಲ್ ಹಾಗೂ ಇನ್ನಿತರ ಕಾರಣಗಳಿಂದ ನಾಟಕ ಹಾಗೂ ರಂಗ ಚಟುವಟಿಕೆಗಳಿಂದ ಜನರು ದೂರವಾಗುತ್ತಿದ್ದಾರೆ. ಅಂತಹ ಸಂದಿಗ್ಧ ಸ್ಥಿತಿಯಲ್ಲೂ ಸಹ ಸಾಮಾಜಿಕ ಮೌಲ್ಯ, ಪ್ರಜ್ಞೆ ಬಿತ್ತುವ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಗಭೂಮಿಯ ಹತ್ತಿರಕ್ಕೆ ತರುವ ಕೆಲಸ ಸುಮನಸಾದಂತಹ ರಂಗತಂಡಗಳು ಮಾಡುತ್ತಿವೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಶ್ಲಾಘಿಸಿದರು.
ಉಡುಪಿಯ ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬದ 4ನೇ ದಿನವಾದ ಫೆ.26ರ ರಾತ್ರಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲ್ಕೂರ ಬಿಲ್ಡರ್ಸ್ ಆಡಳಿತ ನಿರ್ದೇಶಕ ರಂಜನ್ ಕಲ್ಕೂರ ಮಾತನಾಡಿ, ಸುಮನಸಾ ತಂಡದ ಶಿಸ್ತು, ಸಮಯ ಪಾಲನೆಯು ಎಲ್ಲರಿಗೂ ಆದರ್ಶ. ನಾನು ಈ ಸಮಯ ಪಾಲನೆಯ ಶಿಸ್ತನ್ನು ನನ್ನ ಸಂಸ್ಥೆಯಲ್ಲಿ ಅಳವಡಿಸಿಕೊಳ್ಳುತ್ತಿದ್ದೇನೆ ಎಂದರು.
ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ. ಮಾತನಾಡಿ, ಉಡುಪಿಯ ಸಂಸತಿ ವಿಶ್ವ ಪ್ರತಿಷ್ಠಾನದ ವತಿಯಿಂದ ನೀಡುವ ಮಲಬಾರ್ ವಿಶ್ವರಂಗ ಪುರಸ್ಕಾರಕ್ಕೆ ಈ ಬಾರಿ ಸುಮನಸಾ ಕೊಡವೂರು ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ರವಿರಾಜ ಹೆಗ್ಡೆ ಹಾಗೂ ವಕೀಲ ಅನಿಲಕುಮಾರ್ ಮಾತನಾಡಿದರು.
ರಂಗ ಸಾಧಕಿ ಉಪ್ಪೂರು ಭಾಗ್ಯಲಕ್ಷ್ಮೀ ಅವರಿಗೆ ರಂಗ ಸನ್ಮಾನ ಮಾಡಲಾಯಿತು. ಉದ್ಯಮಿ ಹರೀಶ್ ಪೂಜಾರಿ, ವರಾಹಿ ದಂತ ಚಿಕಿತ್ಸಾಲಯದ ಡಾ. ವಿಜೇತ್ ಶೆಟ್ಟಿ, ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು.
ಸಂಸ್ಥೆಯ ಉಪಾಧ್ಯಕ್ಷ ಯೋಗೀಶ್ ಕೊಳಲಗಿರಿ ಸ್ವಾಗತಿಸಿದರು. ಕಿರಣ್ ವಂದಿಸಿದರು. ಪ್ರಜ್ಞಾ ಮತ್ತು ಶ್ರೀವತ್ಸಾ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುಮನಸಾ ಕೊಡವೂರು ಕಲಾವಿದರಿಂದ ಈದಿ ನಾಟಕ ಪ್ರದರ್ಶನಗೊಂಡಿತು.
ಮಕ್ಕಳಿಗೆ ತರಬೇತಿ ನೀಡುವ ಮೂಲಕ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವ ಕಾರ್ಯ ಶ್ಲಾಘನೀಯ. ಆದರೆ, ಇಂತಹ ಕಾರ್ಯಕ್ರಮಗಳಿಗೆ ಹಿರಿಯರಷ್ಟೇ ಪ್ರೇಕ್ಷಕರಾಗಿ ಬರುತ್ತಿದ್ದಾರೆ. ರಂಗಭೂಮಿ ಇನ್ನಷ್ಟು ಬೆಳಗುವಂತಾಗಲು ತಮ್ಮ ಜತೆಗೆ ಮಕ್ಕಳನ್ನೂ ಕರೆದುಕೊಂಡು ಬರಬೇಕು. ಅದರಿಂದ ಮಕ್ಕಳು ಮುಂದೆ ರಂಗಕರ್ಮಿಗಳಾಗಿ ಬೆಳೆಯಲು ಸಹಕಾರಿಯಾಗುತ್ತದೆ. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ