

ಮಂಡ್ಯ: ಸಕ್ಕರೆ ನಾಡಿನ ಲೋಕಲ್ ಎಲೆಕ್ಷನ್ ವಾರ್ನಲ್ಲಿ ಸಂಸದೆ ಸುಮಲತಾ ಅಂಬರೀಷ್ ನಡೆ ಏನು ಎಂಬುದರ ಚರ್ಚೆ ಭಾರಿ ಜೋರಾಗಿದೆ.
ಬೆಂಬಲಿಗರ ಪರ ಗ್ರಾಮ ಪಂಚಾಯಿತಿ ಚುನಾವಣಾ ಅಖಾಡಕ್ಕೆ ಸುಮಲತಾ ಅವರು ಎಂಟ್ರಿ ಕೊಡ್ತಾರಾ? ಲೋಕಸಭಾ ಚುನಾವಣೆಯಲ್ಲಿ ತಮ್ಮ ಬೆಂಬಲಕ್ಕೆ ನಿಂತ ಬೆಂಬಲಿಗರ ಋಣ ತೀರಿಸ್ತಾರಾ? ಸುಮಲತಾರ ನಿಲುವು ಏನು? ಎಂಬ ಚರ್ಚೆ ಮಂಡ್ಯ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ.
ಸುಮಲತಾ ಬೆಂಬಲ ನಿರೀಕ್ಷೆಯಲ್ಲಿ ಬೆಂಬಲಿಗರಿದ್ದಾರೆ. ಅವರ ಬೆಂಬಲಿಗರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ರೈತ ಸಂಘದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಯಾವ ಪಕ್ಷದ ಬೆಂಬಲಿಗರಿಗೆ ಸುಮಲತಾ ಬೆಂಬಲ ಸಿಗಲಿದೆ ಎಂಬುದೇ ಕುತೂಹಲಕಾರಿ ಸಂಗತಿಯಾಗಿದೆ.
ಆದರೆ, ಸುಮಲತಾ ಬಹಿರಂಗ ಬೆಂಬಲ ಘೋಷಣೆ ಅಷ್ಟು ಸುಲಭವಲ್ಲ. ಒಬ್ಬರಿಗೆ ಬೆಂಬಲ ಘೋಷಿಸಿದರೆ ಮತೊಬ್ಬರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ರೈತ ಸಂಘದಲ್ಲಿರುವ ಸುಮಲತಾ ಬೆಂಬಲಿಗರು ಬಹುತೇಕ ಕಡೆ ಪರಸ್ಪರ ಎದುರಾಳಿಯಾಗಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ವಿಚಾರದಲ್ಲಿ ಸುಮಲತಾ ನಿಲುವು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ತಟಸ್ಥವಾಗಿಯೇ ಉಳಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಚುನಾವಣೆ ಘೋಷಣೆಯಾದ ಬಳಿಕ ಮಂಡ್ಯದತ್ತ ಅವರು ಮುಖ ಮಾಡಿಲ್ಲ. ಕೆ.ಆರ್.ಪೇಟೆ ಬೈಎಲೆಕ್ಷನ್ ರೀತಿಯಲ್ಲೇ ತಟಸ್ಥರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. (ದಿಗ್ವಿಜಯ ನ್ಯೂಸ್)