

ಶಿರಸಿ: ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹಾವೇರಿ ಘಟಕ ಮತ್ತು ರಂಗ ಕುಸುಮ ಪ್ರಕಾಶನ ರಾಣೆಬೆನ್ನೂರು ನೀಡುವ ಕರ್ನಾಟಕ ಕಲಾನಿಧಿ ಪ್ರಶಸ್ತಿಗೆ ಯಕ್ಷಗುರು ಸುಮಾ ಗಡಿಗೆಹೊಳೆ ಆಯ್ಕೆಯಾಗಿದ್ದಾರೆ.
ಯಕ್ಷಗಾನ ಕಲಾವಿದೆಯಾದ ಸುಮಾ ಗಡಿಗೆಹೊಳೆ, ತಮ್ಮ 32ನೇ ವಯಸ್ಸಿನಲ್ಲಿ ಸುಬ್ರಾಯ ಭಟ್ ಅವರಲ್ಲಿ ಯಕ್ಷಗಾನ ಕಲಿತು ರಂಗ ಪ್ರವೇಶಿಸಿದವರು. ಗಡಿಗೆಹೊಳೆಯ ಕಾಶ್ಯಪ ಪ್ರತಿಷ್ಠಾನ ಮಹಿಳಾ ಯಕ್ಷಗಾನ ಮಂಡಳಿಯ ಮೂಲಕ ಬೆಳಕಿಗೆ ಬಂದ ಅವರು, ಭಸ್ಮಾಸುರ ಮೋಹಿನಿ ಯಕ್ಷಗಾನಗಳಲ್ಲಿ ಭಸ್ಮಾಸುರನ ಪಾತ್ರ ನಿರ್ವಹಿಸುವ ಮೂಲಕ ನಾಡಿನ ಗಮನ ಸೆಳೆದಿದ್ದಾರೆ.
2018ರಲ್ಲಿ ಯಕ್ಷ ಕಲಾ ಸಂಗಮ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಮಂಡಳಿ ಸ್ಥಾಪಿಸಿ ನಾಡಿನ ಅನೇಕ ಕಡೆ ಯಕ್ಷಗಾನ ಕಲಿಸಿಕೊಡುವ ಮೂಲಕ ಯಕ್ಷಗಾನ ಗುರುವಾಗಿ ಅನೇಕ ಶಿಷ್ಯರನ್ನು ಬೆಳೆಸಿದ್ದಾರೆ. ಕಡಲಾಚೆಯ ದೇಶಗಳಲ್ಲಿ, ವಿಶೇಷವಾಗಿ ಅಮೆರಿಕದಲ್ಲಿಯೂ ಅಲ್ಲಿಯ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ, ನಂತರ ಅಲ್ಲಿಗೆ ತೆರಳಿ ಯಕ್ಷಗಾನ ಕಲಿಸುವ ಮೂಲಕ ಕಲಾ ಸೇವೆ ಸಲ್ಲಿಸಿದ್ದಾರೆ.
ಅವರ ಈ ಸಾಧನೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನ. 24ರಂದು ಬೆಳಗ್ಗೆ 10 ಗಂಟೆಗೆ ರಾಣೆಬೆನ್ನೂರಿನ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿರುವ ಮಕ್ಕಳ ಸಾಂಸ್ಕೃತಿಕ ಸೌರಭ ಹಾಗೂ ವಾರ್ಷಿಕೋತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.