

ಸುಳ್ಯ: ಪ್ರಾಕೃತಿಕ ವಿಕೋಪಗಳು ಎದುರಾದಾಗ ಎಲ್ಲ ಇಲಾಖಾ ಅಧಿಕಾರಿಗಳು ಸರ್ವ ಸನ್ನದ್ಧತೆಯೊಂದಿಗೆ ಜನರ ಸಂಕಷ್ಟಕ್ಕೆ ನೆರವಾಗಬೇಕು ಎಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಉದಯ ಶೆಟ್ಟಿ ಹೇಳಿದರು.
ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಇರುವ ಅಪಾಯಕಾರಿ ಮರಗಳನ್ನು ತೆರವು ಮಾಡಬೇಕು. ಗುಡ್ಡ ಜರಿತ, ಪ್ರವಾಹ ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕಾಳಜಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಮಾಡಬೇಕು. ರಸ್ತೆಗಳ ಬದಿಯ ಚರಂಡಿ ದುರಸ್ತಿ ಮತ್ತಿತರ ಕೆಲಸಗಳನ್ನು ಕೂಡಲೇ ಪೂರ್ತಿ ಮಾಡಬೇಕು ಎಂದು ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಮಾತನಾಡಿ, ಪ್ರಾಕೃತಿಕ ವಿಕೋಪಗಳು ಎದುರಾಗುವ ಕೆಲವೊಂದು ಪ್ರದೇಶಗಳ ಪಟ್ಟಿ ಮಾಡಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ನಗರ ಪಂಚಾಯಿತಿ ಕಸ ವಿಲೇವಾರಿ ಮತ್ತು ತ್ಯಾಜ್ಯ ಘಟಕ ನಿರ್ಮಾಣದ ಸ್ಥಳದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ತ್ಯಾಜ್ಯ ನಿರ್ವಹಣೆ, ತ್ಯಾಜ್ಯ ಘಟಕ ನಿರ್ಮಾಣಕ್ಕೆ ಅನುದಾನ ಬರುತ್ತದೆ. ಈ ಅನುದಾನ ಬಳಕೆ ಮಾಡಿ ಅದಕ್ಕಾಗಿ ಸೂಕ್ತ ಜಾಗ ಗುರುತಿಸಿ ಎಂದು ಆಡಳಿತಾಧಿಕಾರಿ ನಗರ ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ತಹಸೀಲ್ದಾರ್ ಮಂಜುನಾಥ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ ಸರ್ಕಾರಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥೆ ಹಾಗೂ ಅಗತ್ಯ ಸೌಕರ್ಯಗಳ ಬೇಡಿಕೆಯ ಬಗ್ಗೆ ವಿವರಿಸಿದರು. ಸುಳ್ಯ ತಾಲೂಕಿನಲ್ಲಿ ಮೇಲ್ಛಾವಣಿ ಗೋಡೆ ಮತ್ತಿತರ ದುರಸ್ತಿ ಮಾಡಬೇಕಾದ 92 ಶಾಲೆಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ತಾಲೂಕಿನ ಒಟ್ಟು ಶಾಲೆಗಳ ಪೈಕಿ 33 ಶಾಲೆಗಳ ದುರಸ್ತಿಗೆ 97.1 ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ. ಅಕ್ಷರ ದಾಸೋಹ ಕೊಠಡಿಗಳ ಬೇಡಿಕೆ ಇದ್ದ 19 ಹೊಸ ಅಕ್ಷರ ದಾಸೋಹ ಕೊಠಡಿ ನಿರ್ಮಾಣ ಆಗಬೇಕಾಗಿದೆ. 25 ಕಡೆ ದುರಸ್ತಿ ಮಾಡಬೇಕಾಗಿದೆ ಎಂದರು.