

ವಿಜಯವಾಣಿ ಸುದ್ದಿಜಾಲ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬೋಳೂರು ಮೊಗವೀರ ಮಹಾಸಭಾ ಸಹಯೋಗದಲ್ಲಿ ಫಲ್ಗುಣಿ ನದಿಯಲ್ಲಿ ನಗರದ ಸುಲ್ತಾನ್ ಬತ್ತೇರಿ ಯಿಂದ ಕಸಬಾ ಬೆಂಗ್ರೆ ತನಕ ನಡೆದ ಜಲಥಾನ್ ನಲ್ಲಿ ವಿವಿಧ ಫೆರಿ ಬೋಟು, 20 ಕ್ಕೂ ಅಧಿಕ ನಾಡದೋಣಿಗಳು ಭಾಗವಹಿಸಿದವು.
ಮತದಾನದ ಜಾಗೃತಿ ಮೂಡಿಸುವ ಧ್ವಜಗಳನ್ನು ಧರಿಸಿ ನದಿ ತುಂಬಾ ಓಡಾಡುತ್ತಿದ್ದ ಬೋಟು, ನಾಡದೋಣಿಗಳು, ಯಕ್ಷಗಾನ ವೇಷಧಾರಿಗಳ ಕುಣಿತ, ಭಾಗವತರ ಕಂಠಸಿರಿಯಲ್ಲಿ ಪ್ರಸಾರವಾಗುತ್ತಿದ್ದ ಜಾಗೃತಿ ಹಾಡುಗಳು, ಬಲ್ಮಠ ಹೆಣ್ಣು ಮಕ್ಕಳ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು, ಮೀನುಗಾರ ಮುಖಂಡರು, ಅಧಿಕಾರಿಗಳ ತಂಡ ಸುತ್ತಲಿನ ನಾಗರಿಕ ಪ್ರಪಂಚದ ಗಮನ ಸೆಳೆಯಿತು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಆನಂದ್ ಅವರು, ಪ್ರಜಾಪ್ರಭುತ್ವದ ಹಬ್ಬವಾದ ಮತದಾನದ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಜಿಲ್ಲಾಡಳಿಯ ಎಲ್ಲ ಅಗತ್ಯ ಪೂರ್ವಸಿದ್ಧತೆ ನಡೆಸಿದೆ. ಎಲ್ಲ ಮತದಾನ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಶೇ.77.15 ಮತದಾನವಾಗಿದ್ದು, ಈ ಬಾರಿ ಕನಿಷ್ಠ ಶೇ. 5 ಹೆಚ್ಚುವರಿ ಮತದಾನ ನಡೆಯುವಂತೆ ನಾವು ಮುತುವರ್ಜಿ ವಹಿಸಬೇಕಾಗಿದೆ ಎಂದು ಹೇಳಿದರು.
ದೇಶಕ್ಕೆ ಉತ್ತಮ ನಾಯಕತ್ವ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ಅರ್ಹ ಪ್ರತಿನಿಧಿಯನ್ನು ಆಯ್ಕೆ ಮಾಡಲು ಇರುವ ಳ್ಳೆಯ ಅವಕಾಶ ಲೋಕಸಭಾ ಚುನಾವಣೆ. ಜಾತಿ, ಮತ, ಧರ್ಮ, ಭಾಷೆಯನ್ನು ನೋಡದೆ, ಕೇವಲ ಅರ್ಹತೆಯನ್ನು ಆಧರಿಸಿ ಲೋಕಸಭಾ ಸದಸ್ಯನನ್ನು ಆಯ್ಕೆ ಮಾಡುವಂತೆ ಮುಖ್ಯ ಅತಿಥಿ ಬೋಳೂರು ಮೊಗವೀರ ಮಹಾಸಭಾ ಅಧ್ಯಕ್ಷ ಯಶವಂತ ಮೆಂಡನ್ ಹೆಳಿದರು. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಉಪಸ್ಥಿತರಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ದಿಲೀಪ್ ಕುಮಾರ್, ದಿವ್ಯಾ, ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ, ಬೋಳೂರು ಮೊಗವೀರ ಮಹಾಸಭಾ ಮಹಿಳಾ ಅಧ್ಯಕ್ಷೆ ಯೋಗಿನಿ ಬಂಗೇರ, ಸ್ವೀಪ್ ಅಧಿಕಾರಿ ಡೊಂಬಯ್ಯ ಇಡ್ಕಿದು ಮುಂತಾದವರು ಉಪಸ್ಥಿತರಿದ್ದರು.
......................
ಕಡಲ ತೀರದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಮೀನುಗಾರ ಸಮುದಾಯ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿ ಸಮುದಾಯವನ್ನು ತಲುಪುವುದು ಫಲ್ಗುಣಿ ನದಿಯಲ್ಲಿ ನಡೆದ ಜಲಥಾನ್ ಕಾರ್ಯಕ್ರಮದ ಮುಖ್ಯ ಉದ್ದೇಶ. ಕಳೆದ ಚುನಾವಣೆಗಳನ್ನು ಅವಲೋಕಿಸಿದರೆ ಒಟ್ಟು ದಕ್ಷಿಣ ಕನ್ನಡದ ಮತದಾನದ ಪ್ರಮಾಣ ಅಧಿಕವಿದ್ದರೂ, ಮಂಗಳೂರು ದಕ್ಷಿಣ ಹಾಗೂ ಉತ್ತರ ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಸ್ವಲ್ಪ ಕಡಿಮೆ ಇತ್ತು. ಈ ದೃಷ್ಟಿಯಿಂದಲೂ ಈ ಭಾಗದ ಜನರ ಬಳಿಗೆ ತೆರಳಿ ವಿವಿ ರೀತಿಯಲ್ಲಿ ಮತದಾರರಲ್ಲಿ ಮತದಾನಕ್ಕೆ ಪ್ರೇರಣೆ ನೀಡುವ ಕೆಲಸ ಮಾಡಲಾಗುತ್ತಿದೆ. ಕರಾವಳಿಯ ಕಡಲು ಮತ್ತು ನದಿ ಒಂದು ಅಪೂರ್ವ ಸಂಪತ್ತು. ಈ ಹಿನ್ನೆಲೆಯಲ್ಲಿ ಕೂಡ ಜಲಥಾನ್ ಮಹತ್ವ ಪಡೆದಿದೆ.
ಡಾ.ಆನಂದ್
ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು.