

ಮೈಸೂರು: ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅ.21ರಂದು ‘ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ’ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಸಾಂಸ್ಕೃತಿಕ ಉಪ ಸಮಿತಿ ವಿಶೇಷಾಧಿಕಾರಿ ಆಗಿರುವ ಜಿಪಂ ಸಿಇಒ ಕೆ.ಎಂ.ಗಾಯತ್ರಿ ತಿಳಿಸಿದರು.
ಅರಮನೆ ವೇದಿಕೆಯಲ್ಲಿ ಅಂದು ಬೆಳಗ್ಗೆ 6ಗಂಟೆಗೆ ಕಾರ್ಯಕ್ರಮ ಆರಂಭಗೊಂಡು ಸಂಜೆ 6 ಗಂಟೆವರೆಗೂ ನಡೆಯಲಿದೆ. ಸ್ಯಾಕ್ಸೋಫೋನ್ ವಾದನ, ವಯೋಲಿನ್ ವಾದನ, ಒಡೆಯರ್ ಕೃತಿಗಳ ಕುರಿತ ನೃತ್ಯರೂಪಕ, ಭರತನಾಟ್ಯ, ಗಾನಲಹರಿ, ನಾದಲಹರಿ ಸಂಗೀತ, ರಂಗಗೀತೆಗಳು, ಜನಪದ, ಸುಗಮ ಸಂಗೀತ, ವಾದ್ಯಸಂಗೀತ ಸೇರಿದಂತೆ ವಿವಿಧ ಕಲಾ ಪ್ರಕಾರದ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಕಾರ್ಯಕ್ರಮಕ್ಕೆ 45 ನಿಮಿಷ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಸಂಚಾರಿ ವಾಹನದಲ್ಲಿ ಕಾರ್ಯಕ್ರಮ
ಈ ಬಾರಿ ವಿಶೇಷವಾಗಿ ಸಂಚಾರಿ ವಾಹನದಲ್ಲೂ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅ.15ರಿಂದ 23ರವರೆಗೆ ಸಂಜೆ 5ರಿಂದ ರಾತ್ರಿ 9.30ರವರೆಗೆ ನಗರದ ವಿವಿಧ ಪ್ರದೇಶದಲ್ಲಿ ವಾಹನದಲ್ಲಿಯೇ ಕಾರ್ಯಕ್ರಮ ನೀಡಲಾಗುವುದು ಎಂದು ಕೆ.ಎಂ.ಗಾಯತ್ರಿ ತಿಳಿಸಿದರು.
ವಾದ್ಯಗೋಷ್ಠಿಯೊಂದಿಗೆ ವಿವಿಧ ಕಲಾತಂಡಗಳಿಂದ ಸುಗಮ ಸಂಗೀತ, ವಾದ್ಯಸಂಗೀತ, ಭಕ್ತಿಗೀತೆ, ಭಾವಗೀತೆ, ಸಾಂಪ್ರದಾಯಿಕ ಗೀತೆ ಸೇರಿದಂತೆ ಇನ್ನಿತರ ಗಾಯನ ಕಾರ್ಯಕ್ರಮಗಳು ಇರಲಿವೆ. ಜನದಟ್ಟಣೆ ಇರುವ ಪ್ರದೇಶದಲ್ಲಿ ಕನಿಷ್ಠ 30 ನಿಮಿಷ ಕಾರ್ಯಕ್ರಮ ಪ್ರಸ್ತುತಪಡಿಸಲಾಗುವುದು ಎಂದು ಹೇಳಿದರು.