ವಿಜಯವಾಣಿ ಸುದ್ದಿಜಾಲ ಸುಳ್ಯ
ನಗರದಲ್ಲಿ ನೀರು ಸರಬರಾಜು ಯೋಜನೆಗಾಗಿ ರಸ್ತೆ ಅಗೆದಿರುವುದರಿಂದ ಆಗುತ್ತಿರುವ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಒದಗಿಸಿ, ಮಳೆ ನಿಂತ ಬಳಿಕ ಸರಿಯಾದ ಕ್ರಮ ಕೈಗೊಳ್ಳಲಾಗುವುದು ಎಂದು ಸುಳ್ಯ ನಗರ ಪಂಚಾಯಿತಿ ಸಭೆಯಲ್ಲಿ ಅಧಿಕಾರಿಗಳು ಭರವಸೆ ನೀಡಿದರು.
ಸುಳ್ಯ ನಗರ ಪಂಚಾಯಿತಿಯಲ್ಲಿ ಆಡಳಿತಾಧಿಕಾರಿ ಮಂಜುನಾಥ ಅಧ್ಯಕ್ಷತೆಯಲ್ಲಿ ಸಭೆ ನಡೆದ ವೇಳೆ ಈ ಮಾಹಿತಿ ನೀಡಲಾಯಿತು. ಇದಕ್ಕೂ ಮೊದಲು ನಪಂ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಸಭೆಯಲ್ಲಿ ಬಿಚ್ಚಿಟ್ಟರು.
ನಪಂ ಸದಸ್ಯ ಉಮ್ಮರ್ ಕೆ.ಎಸ್ ಮಾತನಾಡಿ, ನಗರವನ್ನೊಮ್ಮೆ ಸುತ್ತಿದರೆ ನೈಜ ಸಮಸ್ಯೆ ಅರಿವಾಗುತ್ತದೆ. ರಸ್ತೆ ಅಗೆದು ಸರಿಯಾಗಿ ಮುಚ್ಚಿಲ್ಲ. ಈಗ ನೀರು ಸರಬರಾಜು ಆಗುತ್ತಿರುವ ನೀರಿನ ಪೈಪ್ ತುಂಡಾಗಿ ಸಮಸ್ಯೆ ಆಗಿದೆ ಎಂದರು.
ಬಳಿಕ ಮಾತನಾಡಿದ ಸದಸ್ಯ ಡೇವಿಡ್ ಧೀರಾ ಕ್ರಾಸ್ತ, ಮಳೆ ನೀರು ಹೋಗುವ ಚರಂಡಿಯಲ್ಲೇ ಪೈಪ್ ಹಾಕಿದ್ದಾರೆ. ಇಂಟರ್‌ಲಾಕ್ ತೆಗೆದಿರುವುದನ್ನು ಮತ್ತೆ ಅಳವಡಿಸದೆ ಹಾಗೆ ಬಿಟ್ಟಿದ್ದಾರೆ. ನಾವು ಮೂರೂವರೆ ವರ್ಷದಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ಮಾಡಿದ ಕೆಲಸಗಳು ಈ ಕುಡಿಯುವ ನೀರಿನ ಸರಬರಾಜು ಯೋಜನೆಯಿಂದಾಗಿ ಹಾಳಾಗಿ ಹೋಗಿವೆ ಎಂದು ಹೇಳಿದರು.
ಸದಸ್ಯೆ ಶಿಲ್ಪಾ ಸುದೇವ್ ಜಯನಗರದಲ್ಲಿ ಆಗುತ್ತಿರುವ ಕೆಲಸದಿಂದ ಆರು ಮನೆಯವರಿಗೆ ರಸ್ತೆ ಇಲ್ಲದೆ ಆಗಿರುವ ಸಮಸ್ಯೆಯನ್ನು ವಿವರಿಸಿದರು. ಸದಸ್ಯ ಎಂ.ವೆಂಕಪ್ಪ ಗೌಡ, ಒಳಚರಂಡಿ ಕಾಮಗಾರಿ ಈ ಹಿಂದೆ ಆಗಿ ಪ್ರಯೋಜನಕ್ಕೆ ಬಾರದಿರುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿ, ಸಮಸ್ಯೆ ಆಗದಂತೆ ಕೆಲಸ ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಸಮಸ್ಯೆಯನ್ನು ಆಲಿಸಿದ ನಗರ ನೀರು ಸರಬರಾಜು ಮಂಡಳಿಯ ಎ.ಇ.ಇ ಅಜಯ್ ಕುಮಾರ್, ಸಮಸ್ಯೆ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಈಗ ರಸ್ತೆ ಕಟ್ ಮಾಡಿರುವುದನ್ನು ವೆಟ್‌ಮಿಕ್ಸ್ ಹಾಕಿ ತಕ್ಷಣಕ್ಕೆ ಸರಿ ಪಡಿಸಿಕೊಡುತ್ತೇವೆ. ಇದು ತಾತ್ಕಾಲಿಕವಷ್ಟೆ. ಈಗ ಮಳೆಗೆ ಕೆಲಸ ನಿಲ್ಲಿಸಿದ್ದು, ಮಳೆ ಕಡಿಮೆ ಆದ ಕೂಡಲೇ ಮತ್ತೆ ಕೆಲಸ ಆರಂಭಿಸುತ್ತೇವೆ. ಸಮಸ್ಯೆಗಳಾದಾಗ ತಕ್ಷಣ ಸ್ಪಂದನೆ ಮಾಡುತ್ತೇವೆ ಎಂದು ಹೇಳಿದರು.
ಮುಖ್ಯಾಧಿಕಾರಿ ಸುಧಾಕರ್, ನಗರ ನೀರು ಸರಬರಾಜು ಮಂಡಳಿಯ ಎ.ಇ ಶ್ರೀಕಾಂತ್ ಇದ್ದರು.
ಸದಸ್ಯರಾದ ಸರೋಜಿನಿ ಪೆಲತಡ್ಕ ಹಾಗೂ ಶೀಲಾ ಕುರುಂಜಿ, ಪೈಪ್ ಹಾಕಲು ರಸ್ತೆ ಅಗೆದು ಸರಿಯಾಗಿ ಮುಚ್ಚದೆ ಇರುವ ಕುರಿತು ಪ್ರಸ್ತಾಪಿಸಿದರು. ಸದಸ್ಯ ವಿನಯ ಕುಮಾರ್ ಕಂದಡ್ಕ ಮಾತನಾಡಿ, ಕೆಲಸ ನಿರ್ವಹಿಸುವಾಗ ಸರಿಯಾದ ಇಂಜಿನಿಯರನ್ನು ಇಲ್ಲಿ ಬಿಡಬೇಕು. ಮೇಸ್ತ್ರಿ ತನ್ನ ಕೆಲಸವನ್ನೇ ಮಾಡಬೇಕು ಹೊರತು ಅವನು ಪ್ಲಾನಿಂಗ್ ಮಾಡಬಾರದು. ಈ ರೀತಿಯ ಕೆಲಸದಿಂದಾಗಿ ಸಮಸ್ಯೆ ಉಲ್ಬಣಿಸುತ್ತಿದೆ ಎಂದರು.