

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಅಂಗವೈಕಲ್ಯ ಮಕ್ಕಳನ್ನು ಗುರುತಿಸಿ, ವಿಶೇಷ ಕಾಳಜಿ ಮಾಡುವ ಮೂಲಕ ಸಮಾಜದ ಮುನ್ನೆಲೆಗೆ ತರುವ ಪ್ರಯತ್ನ ಮಾಡಬೇಕು ಎಂದು ವಕೀಲ ಬಿ.ಎಸ್.ರುತ್ವಿಕ್‌ಗೌಡ ಹೇಳಿದರು.
ಸಮೀಪದ ಬೆಂಡಿಗಾನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಹೋಬಳಿಮಟ್ಟದ ಸಮನ್ವಯ ಶಿಕ್ಷಣ ಮಧ್ಯವರ್ತನ ಕಾರ್ಯಾಗಾರದಲ್ಲಿ ಮಾತನಾಡಿದರು.
ನ್ಯೂನತೆ ಇರುವ ಮಕ್ಕಳ ಬಗ್ಗೆ ಪಾಲಕರು ಗಮನಹರಿಸಿ ಅವಶ್ಯವಿರುವ ಚಿಕಿತ್ಸೆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇದಕ್ಕೆ ಇಲಾಖೆಗಳ ಮಾರ್ಗದರ್ಶನ ಪಡಯಬಹುದು ಎಂದರು.
ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕಿ ನಿರ್ಮಲಾ ಮಾತನಾಡಿ, ಯಾವುದೇ ತಾರತಮ್ಯವಿಲ್ಲದೆ ಎಲ್ಲ ಮಕ್ಕಳಿಗೂ ಶಿಕ್ಷಣ ದೊರಕಬೇಕೆಂಬ ನಿಟ್ಟಿನಲ್ಲಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದರು.
ಹೊಸಕೋಟೆ ತಾಲೂಕಿನಲ್ಲಿ 327 ವಿಕಲಾಂಗ ಮಕ್ಕಳನ್ನು ಗುರುತಿಸಿದ್ದು, ಅವರಲ್ಲಿರುವ ನೂನ್ಯತೆಗಳಿಗೆ ಅನುಗುಣವಾಗಿ ತೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಸೂಲಿಬೆಲೆ ಹೋಬಳಿ ವ್ಯಾಪ್ತಿಯ 4 ಕ್ಲಸ್ಟರ್‌ಗಳಲ್ಲಿ 43 ಮಕ್ಕಳಿದ್ದು, ಅವರಿಗೆ ಇಲಾಖೆಯಿಂದ ಅಗತ್ಯ ಸೌಲಭ್ಯ ದೊರಕಿಸಿಕೊಡಲಾಗುತ್ತಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗವಿಕಲರ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಸಮನ್ವಯ ಶಿಕ್ಷಣ ಕಾರ್ಯಕ್ರಮ ಅನುಷ್ಠಾನವಾಗಲಿದೆ ಎಂದರು.
ದಿ ಅಸೋಷಿಯೇಷನ್ ಆ್ ಪೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆ ಸಂಯೋಜಕ ಕೀರ್ತಿಪ್ರಸಾದ್ ಮಾತನಾಡಿ, ಅಂಗವಿಕಲ ಮಕ್ಕಳು ಸಮಾಜಕ್ಕೆ ಹೊರೆ ಎನಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಅವರಿಗೆ ಸ್ವಾತಂತ್ರ್ಯವಾಗಿ ಜೀವಿಸುವ ಹಾಗೂ ಆತ್ಮಸ್ಥೈರ್ಯ ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಶಾಲಾ ಹಂತದಲ್ಲಿ ಮುಖ್ಯಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರಿಗೆ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಸಮಾಜದ ಮುಖ್ಯವಾಹಿನಿಯಲ್ಲಿ ಜೀವನ ನೆಡೆಸಲು ಅಂಗವಿಕಲರನ್ನು ಸಬಲೀಕರಣಗೊಳಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಸದಸ್ಯರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಸಮನ್ವಯ ಶಿಕ್ಷಣ ಕಾರ್ಯಕ್ರಮದಡಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಪುನರ್ವಸತಿ ಹಾಗೂ ಶಿಕ್ಷಣ ಸೇವೆ ಓದಗಿಸುವ ವಿಚಾರವಾಗಿ ತರಬೇತಿ ನೀಡಲಾಗಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯ ಬಿ.ಎನ್.ದೇವರಾಜ್, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುನೇಗೌಡ, ಪ್ರೌಢಶಾಲಾ ಮುಖ್ಯಶಿಕ್ಷಕಿ ಭುವನೇಶ್ವರಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮಂಜುನಾಥ್, ಬೇಗೂರು ಪ್ರೌಢಶಾಲೆ ಮುಖ್ಯಶಿಕ್ಷಕಿ ಸರಸ್ವತಿ ಕೆ.ಹೆಗಡೆ, ಉರ್ದು ಪ್ರೌಢಶಾಲೆ ಮುಖ್ಯಶಿಕ್ಷಕಿ ನಾಹಿದಾ, ಬಿಆರ್‌ಪಿ ನಾಗರಾಜ್, ಸಿಆರ್‌ಪಿ ಮಂಜುನಾಥ್, ಸುಮಂಗಲಾ ಇತರರು ಇದ್ದರು.