

ಸೂಲಿಬೆಲೆ: ಮೂಲಸೌಕರ್ಯಗಳಿಂದ ವಂಚಿತವಾಗಿರುವ ಗುಡ್ಡಪ್ಪನಹಳ್ಳಿಗೆ ಶೀಘ್ರ ಅಗತ್ಯ ಸೌಕರ್ಯ ಒದಗಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಹೋಬಳಿಯ ದೊಡ್ಡಹರಳಗೆರೆ ಗ್ರಾಪಂ ವ್ಯಾಪ್ತಿಯ ಗುಡ್ಡಪ್ಪನಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗುಡ್ಡಪ್ಪನಹಳ್ಳಿಗೆ ಈವರೆಗೂ ವಿದ್ಯುತ್ ಸಂಪರ್ಕ ಇರಲಿಲ್ಲ. ಪ್ರಸ್ತುತ 50 ಲಕ್ಷ ರೂ.ವೆಚ್ಚದಲ್ಲಿ 2 ಕಿಮೀ ದೂರವಿರುವ ಗುಳ್ಳಹಳ್ಳಿಯಿಂದ ವಿದ್ಯುತ್ ಕಂಬ ಅಳವಡಿಸಿ, ವಿದ್ಯುತ್ ಸಂಪರ್ಕ ನೀಡಲಾಗಿದೆ. ಗ್ರಾಮ ಪರಿಮಿತಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿದೆ. ಸ್ಥಳೀಯರ ಅಪೇಕ್ಷೆಯಂತೆ ಡಿ.ಶೆಟ್ಟಿಹಳ್ಳಿ ಸಂಪರ್ಕ ರಸ್ತೆ ಹಾಗೂ ಭುವನಹಳ್ಳಿ ಭಾಗಕ್ಕೆ ರಸ್ತೆ ಅಭಿವೃದ್ಧಿ ಮಾಡಿಸಿಕೊಡಲಾಗುವುದು. ಗ್ರಾಪಂ ವ್ಯಾಪ್ತಿಯ ಗುಳ್ಳಹಳ್ಳಿ ಜನರ ಮನವಿಯಂತೆ ಗ್ರಾಮಕ್ಕೆ ಅಗತ್ಯವಿರುವ ಪಶುಚಿಕಿತ್ಸಾಲಯ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.