

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೊಸಕೋಟೆ ತಾಲೂಕಿನ ಹೊಸಕೋಟೆ-ಸೂಲಿಬೆಲೆ ಮಾರ್ಗದ ತಮ್ಮೇಗೌಡ ಬಡಾವಣೆ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿಯಿಂದಾಗಿ ಸಾರ್ವಜನಿಕರು ರಸ್ತೆ ಮಧ್ಯೆ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಹೊಸಕೋಟೆ-ಸೂಲಿಬೆಲೆ ರಸ್ತೆಯಲ್ಲಿ ಲಾರಿ, ಬಸ್, ಟ್ರಕ್‌ನಂಥ ಬೃಹತ್ ವಾಹನಗಳ ಸಂಚಾರವಿದ್ದು ಪೀಕ್ ಅವರ್‌ನಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ಇಂಥ ರಸ್ತೆಯ ಪಾದಚಾರಿ ಮಾರ್ಗಗಳು ತರಕಾರಿ ಸಾಗಣೆ ಅಂಗಡಿಗಳು ಸೇರಿ ಇನ್ನಿತರ ಅಂಗಡಿಯವರು ಒತ್ತುವರಿ ಮಾಡಿಕೊಂಡಿದ್ದು, ಸಾರ್ವಜನಿಕರು ರಸ್ತೆಯಲ್ಲಿ ನಡೆಯುವ ಪರಿಸ್ಥಿತಿ ಎದುರಾಗಿದೆ ಅಲ್ಲದೆ ವಾಹನಗಳ ನಿಲುಗಡೆ ತಾಣವಾಗಿ ಬಳಕೆಯಾಗುತ್ತಿರುವುದರಿಂದ ಪಾದಚಾರಿಗಳು ನಡೆದಾಡಲು ಪರ್ಯಾಯ ಮಾರ್ಗವಿಲ್ಲದಂತಾಗಿದೆ.
ಚರಂಡಿ ಅವ್ಯವಸ್ಥೆ ಶಾಪ: ಪಾದಚಾರಿ ಮಾರ್ಗ ಒತ್ತುವರಿ ಸಮಸ್ಯೆ ಒಂದಾದರೆ ಇದೇ ರಸ್ತೆಯ ರಾಷ್ಟ್ರೀಯ ಹೆದ್ದಾರಿ 207ಕ್ಕೆ ಸಂಪರ್ಕ ಕಲ್ಪಿಸುವ ತಿರುವಿನಲ್ಲಿ ಚರಂಡಿ ಅವ್ಯವಸ್ಥೆಯಿಂದಾಗಿ ಮಲಿನ ನೀರು ರಸ್ತೆಗೆ ಹರಿಯುತ್ತಿದೆ, ಮಳೆ ಸುರಿದರೆ ಮತ್ತಷ್ಟು ಹೆಚ್ಚಿನ ಪ್ರಮಾಣದ ನೀರು ರಸ್ತೆಗೆ ಹರಿದು ರಸ್ತೆ ಜಲಾವೃತಗೊಳ್ಳುತ್ತಿದೆ. ಮೊದಲೇ ಪಾದಚಾರಿ ಒತ್ತುವರಿಯಿಂದಾಗಿ ರಸ್ತೆಯಲ್ಲಿ ನಡೆಯಬೇಕಾದ ಪರಿಸ್ಥಿತಿ ಎದುರಿಸುತ್ತಿರುವ ಜನತೆ ಈ ಕೊಳಚೆ ನೀರನ್ನು ದಾಟಲು ಕಸರತ್ತು ನಡೆಸಬೇಕಿದೆ. ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಈ ಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ವಾಹನಗಳು ಸಾಗಿದಾದ ಚರಂಡಿ ನೀರು ಪಾದಚಾರಿಗಳಿಗೆ ಎಗರುತ್ತಿದೆ. ಇದರಿಂದ ತೀರ ಇರುಸು ಮುರುಸು ಅನುಭವಿಸುತ್ತಿರುವ ಜನತೆ ಅಧಿಕಾರಿಗಳಿಗೆ ಪ್ರತಿನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.
2 ವರ್ಷದಿಂದ ಇದೇ ಸಮಸ್ಯೆ? ಸುಮಾರು ಎರಡು ವರ್ಷದಿಂದ ಇದೇ ಸಮಸ್ಯೆ ಇದ್ದರೂ ನಗರಸಭೆ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ರಾಜ್ಯ ಮಟ್ಟದ ಹಿರಿಯ ಕ್ರೀಡಾಕೂಟದ ಸಂದರ್ಭದಲ್ಲಿ ಇದೇ ಜಾಗದಲ್ಲಿ ಕ್ರೀಡಾಪಟುವೊಬ್ಬರು ಜಾರಿ ಬಿದ್ದು ಗಾಯಗೊಂಡಿದ್ದರು. ಇಂಥ ಪ್ರಕರಣಗಳು ಪುನರಾವರ್ತನೆಯಾಗುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಅಡಕತ್ತರಿಯಲ್ಲಿ ಜನ: ಒಂದೆಡೆ ಪಾದಚಾರಿ ಮಾರ್ಗ ಒತ್ತುವರಿ ಮತ್ತೊಂದೆಡೆ ಹೆದ್ದಾರಿಯ ಅರ್ಧ ಭಾಗ ಆವರಿಸಿದ ಕೊಳಚೆ ನೀರಿನ ನಡುವೆ ಪಾದಚಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಧಿ ಇಲ್ಲದೆ ಸಾರ್ವಜನಿಕರು ರಸ್ತೆಯಲ್ಲಿ ವಾಹನಗಳ ಸಂಚಾರದ ನಡುವೆ ಜೀವ ಮುಷ್ಟಿಯಲ್ಲಿ ಹಿಡಿದು ನಡೆಯುವಂತಾಗಿದೆ. ಇದು ಪ್ರತಿದಿನ ಸನ್ನಿವೇಶವಾದರೂ ಹೆದ್ದಾರಿಯವರಾಗಲಿ ನಗರಸಭೆಯವರಾಗಲಿ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆ ನಿನ್ನೆ ಮೊನ್ನೆಯದಲ್ಲ ಸುಮಾರು ವರ್ಷದಿಂದ ಇದೇ ಸಮಸ್ಯೆ ಇದೆ, ಸೂಲಿಬೆಲೆ ರಸ್ತೆ ತಮ್ಮೇಗೌಡ ಬಡಾವಣೆಯ ವಾಟರ್ ಟ್ಯಾಂಕ್ ಬಳಿ ಪಾದಚಾರಿ ಮಾರ್ಗ ಒತ್ತುವರಿ ಜತೆಗೆ ರಸ್ತೆಗೆ ಹರಿಯುತ್ತಿರುವ ಚರಂಡಿ ನೀರಿನಿಂದಾಗಿ ಪಾದಚಾರಿಗಳು ನಡೆದಾಡಲು ಕಸರತ್ತು ನಡೆಸಬೇಕಿದೆ. ಮಹಿಳೆಯರು ವೃದ್ಧರು, ಶಾಲಾ ಮಕ್ಕಳು ಈ ರಸ್ತೆಯಲ್ಲಿ ದಾಟಲು ಹರಸಾಹಸ ನಡೆಸಬೇಕಿದೆ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕಿದೆ.
ಚನ್ನಕೇಶವ, ಹೊಸಕೋಟೆ ನಿವಾಸಿ