

ಕಲಬುರಗಿ: ಚಿತ್ತಾಪುರ ಪಟ್ಟಣದಲ್ಲಿ ಫೆಬ್ರುವರಿ 29ರಂದು (ಗುರುವಾರ) ನಡೆಯಬೇಕಿದ್ದ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ನಮೋ ಬ್ರಿಗೇಡ್ ಕಾರ್ಯಕ್ರಮಕ್ಕೆ ರಾತ್ರೋರಾತ್ರಿ ತಡೆ ನೀಡಿ ಆದೇಶ ಹೊರಡಿಸಿದ್ದು, ಮಧ್ಯರಾತ್ರಿ ಜಿಲ್ಲಾ ಪ್ರವೇಶವನ್ನು ಕಮಲಾಪುರ ಬಳಿ ತಡೆದು ಅವರನ್ನು ವಾಪಸ್ ಕಳುಹಿಸಲಾಗಿದೆ.
ಚಿತ್ತಾಪುರ ಪಟ್ಟಣದ ಬಾಪುರಾವ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಾಗೂ ನಮೋ ಬ್ರಿಗೇಡ್ ನಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕುರಿತು ಆದೇಶ ಹೊರಡಿಸಿರುವ ಉಪ ವಿಭಾಗಾಧಿಕಾರಿ ರೂಪಿಂದರ್ ಕೌರ್, ಫೆ.28ರ ಮಧ್ಯರಾತ್ರಿ 11ಗಂಟೆಯಿಂದ ಮಾರ್ಚ್ 4ರ ಮಧ್ಯರಾತ್ರಿ 12ಗಂಟೆವರೆಗೆ ಕಲಬುರಗಿ ಜಿಲ್ಲೆಯ ಕಮಲಾಪುರ, ಜೇವರ್ಗಿ, ಯಡ್ರಾಮಿ, ಅಫಜಲಪುರ, ಆಳಂದ ಹಾಗೂ ಕಾಳಗಿ, ಕಲಬುರಗಿ ತಾಲೂಕುಗಳಲ್ಲಿ ಪ್ರವೇಶ ಮಾಡದಂತೆ ಆದೇಶ ಹೊರಡಿಸಲಾಗಿದೆ.
ಭಾಲ್ಕಿಯಲ್ಲಿ ಕಾರ್ಯಕ್ರಮ ಮುಗಿಸಿ ಕಲಬುರಗಿಗೆ ಆಗಮಿಸುತ್ತಿದ್ದ ಚಕ್ರವರ್ತಿ ಸೂಲಿಬೆಲೆಯವರನ್ನು ಕಮಲಾಪುರ ತಾಲೂಕಿನ ಕಿಣ್ಣಿಸಡಕ್ ಕ್ರಾಸ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ತಡೆದು, ವಾಪಸ್ ಕಳುಹಿಸಲಾಗಿದೆ.
ಸಾರ್ವಜನಿಕ ಹಿತದೃಷ್ಟಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಹಾಗೂ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳಿಂದ ಕಾರ್ಯಕ್ರಮದಲ್ಲಿ ಗಲಾಟೆ ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ ಕಾರ್ಯಕ್ರಮ ಅನುಮತಿಗೆ ನಿರಾಕರಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.