ಗೃಹಲಕ್ಷ್ಮಿ ಹಣ, ಖಾತೆ ನಿರ್ವಹಣೆಗೆ ಜಮಾ!

suibele bank problem
Published on

ಸೂಲಿಬೆಲೆಯಲ್ಲಿ ಭಾಗ್ಯಗಳಿಗಾಗಿ ಪರದಾಟ

ಆಧಾರ್ ಲಿಂಕ್‌ಗೆ ಬ್ಯಾಂಕ್‌ಗಳಲ್ಲಿ ಜನದಟ್ಟಣೆ

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಗೆ ಫಲಾನುಭವಿಗಳಾಗಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜೋರಾಗಿರುವ ನಡುವೆಯೇ ಖಾತೆ ನಿರ್ವಹಣೆ ವೆಚ್ಚವೆಂದು ಆಯಾ ಬ್ಯಾಂಕ್‌ಗಳು ಸ್ವಲ್ಪಮಟ್ಟದ ಹಣ ಮುಟ್ಟುಗೋಲು ಹಾಕಿಕೊಳ್ಳುತ್ತಿವೆ ಎಂಬ ಮಾತು ಕೇಳಿಬರುತ್ತಿದೆ. ಇದು ಲಾನುಭವಿಗಳು ಹಾಗೂ ಬ್ಯಾಂಕ್ ಸಿಬ್ಬಂದಿ ನಡುವೆ ತಿಕ್ಕಾಟಕ್ಕೆ ಎಡೆಮಾಡಿಕೊಟ್ಟಿದೆ.
ಗ್ಯಾರಂಟಿಗಳ ಅನುಷ್ಠಾನಕ್ಕೆ ಅಧಿಕಾರಿಗಳು ಬೆವರು ಹರಿಸುತ್ತಿದ್ದಾರೆ. ಲಾನುಭವಿಗಳೂ ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಮುಗಿಬೀಳುತ್ತಿದ್ದಾರೆ. ಇದರ ನಡುವೆ ಸರ್ವರ್ ಕಾಟ, ಕರೆಂಟ್ ಕಣ್ಣಾಮುಚ್ಚಾಲೆ, ಮೊಬೈಲ್‌ಗೆ ಒಟಿಪಿ ಬರದಿರುವುದೂ ಸೇರಿ ಹಲವು ಸಮಸ್ಯೆ ಎದುರಾಗಿವೆ. ಇವೆಲ್ಲವನ್ನೂ ಎದುರಿಸಿ ನೋಂದಾಯಿಸಿಕೊಂಡ ಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತಿದ್ದರೂ ಖಾತೆ ನಿರ್ವಹಣೆ ನೆಪದಲ್ಲಿ ಬ್ಯಾಂಕ್‌ಗಳು ಹಣ ಮುಟ್ಟುಗೋಲು ಹಾಕಿಕೊಳ್ಳುತ್ತಿರುವುದು ಲಾನುಭವಿಗಳ ಅಸಹನೆಗೆ ಕಾರಣವಾಗಿದೆ.
ಲಿಂಕ್ ಸಮಸ್ಯೆ: ಅನ್ನಭಾಗ್ಯ ಯೋಜನೆಯ ಹಣ ಕೆಲವರ ಖಾತೆಗಳಿಗೆ ಜಮೆಯಾಗಿದೆ, ಅನೇಕರು ಬ್ಯಾಂಕ್‌ಗಳಿಗೆ ಅಲೆದಾಡುತ್ತಿದ್ದಾರೆ, ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಲ್ಲ. ಅದೇ ರೀತಿ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಎಂಬ ಕಾರಣಕ್ಕೆ ಅನ್ನಭಾಗ್ಯದ 5 ಕೆಜಿ ಅಕ್ಕಿ ಹಣ ಜಮೆಯಾಗಿಲ್ಲ ಎಂಬ ಉತ್ತರ ಸಿಗುತ್ತಿದೆ ಎಂದು ಹಲವರು ಅಲವತ್ತುಕೊಂಡಿದ್ದಾರೆ.

ಬ್ಯಾಂಕ್‌ಗಳಲ್ಲಿ ಇನ್ನಿತರ ಕೆಲಸಕ್ಕೆ ತೊಂದರೆ: ಗೃಹಲಕ್ಷ್ಮೀ ಯೋಜನೆಗೆ ಚಾಲನೆ ದೊರೆತ ಬಳಿಕ ಸಾವಿರಾರು ಮಂದಿ ಬ್ಯಾಂಕ್‌ಗಳಲ್ಲಿ ಪ್ರತಿನಿತ್ಯ ಜಮಾಯಿಸುತ್ತಿದ್ದಾರೆ. ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಬ್ಯಾಂಕ್‌ಗಳ ಬಳಿ ಸರದಿ ಸಾಲಿನಲ್ಲಿ ಕಾಯುತ್ತಿರುವ ದೃಶ್ಯ ಕಂಡುಬರುತ್ತಿವೆ. ಇದರಿಂದ ಬ್ಯಾಂಕ್‌ನ ಇನ್ನಿತರ ಗ್ರಾಹಕರ ಸೇವೆ ದುಬಾರಿಯಾಗಿ ಪರಿಣಮಿಸಿದೆ. ಇದನ್ನು ನಿಭಾಯಿಸುವುದು ಬ್ಯಾಂಕ್ ಸಿಬ್ಬಂದಿಗೆ ತಲೆಬೇನೆ ತರಿಸಿದೆ. ಹಣಪಾವತಿ ಮತ್ತು ನಗದು ಸ್ವೀಕಾರಕ್ಕೆ ಅವಕಾಶವೇ ಇಲ್ಲದಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಸೂಲಿಬೆಲೆಯಲ್ಲಿ ತಿಕ್ಕಾಟ: ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿಯಲ್ಲಿನ ಬ್ಯಾಂಕ್‌ಗಳು ಲಾನುಭವಿಗಳಿಂದ ತುಂಬಿ ತುಳುಕುತ್ತಿದೆ. ಬ್ಯಾಂಕ್‌ಗಳಲ್ಲಿ ಆಧಾರ್ ಜೋಡಣೆ ಸಾಲು ಜೋರಾಗಿದೆ, ಸೂಲಿಬೆಲೆ ಕರ್ನಾಟಕ ಬ್ಯಾಂಕ್‌ನಲ್ಲಿ ಗ್ರಾಹಕರ ವ್ಯವಹಾರಕ್ಕಿಂತ ಅನ್ನಭಾಗ್ಯ, ಗೃಹಲಕ್ಷ್ಮೀ ಫಲಾನುಭವಿಗಳಾಗುವವರೇ ಹೆಚ್ಚಾಗಿರುವುದರಿಂದ ಇನ್ನಿತರ ಸೇವೆ ದುಬಾರಿಯಾಗಿದೆ. ಬ್ಯಾಂಕ್‌ಗಳಲ್ಲಿ ನಿತ್ಯ ವ್ಯವಹಾರದಲ್ಲಿ ಹೈರಾಣಗಿರುವ ಬ್ಯಾಂಕ್ ಸಿಬ್ಬಂದಿಗೆ ಈ ಹೆಚ್ಚುವರಿ ಕೆಲಸ ತಲೆನೋವು ತರಿಸಿದೆ, ಏತನ್ಮಧ್ಯೆ ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿ ನಡುವೆ ತಿಕ್ಕಾಟ ನಡೆಯುತ್ತಿವೆ. ಆಧಾರ್ ಲಿಂಕ್ ಪ್ರಕ್ರಿಯೆ ಮುಗಿಸಿ ಗ್ರಾಹಕರನ್ನು ಸಾಗಹಾಕುವಲ್ಲಿ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ಏತನ್ಮಧ್ಯೆ ಬ್ಯಾಂಕ್ ನಿರ್ವಹಣೆ ಎಂಬ ಕಾರಣಕ್ಕೆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿರುವುದು ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.


ಸರ್ಕಾರ ಯಾವುದೇ ಪೂರ್ವಸಿದ್ಧತೆ ಇಲ್ಲದೆ ಏಕಾಏಕಿ ಅನ್ನಭಾಗ್ಯದ ಹಣವನ್ನು ಖಾತೆಗಳಿಗೆ ವರ್ಗಾವಣೆ ಮಾಡಿರುವ ಕಾರ್ಯಕ್ರಮ ಅವಿದ್ಯಾವಂತ ಲಾನುಭವಿಗಳಿಗೆ ಗೊಂದಲ ಮೂಡಿಸಿದೆ. ಆಧಾರ್ ಲಿಂಕ್ ಪ್ರಹಸನದಿಂದ ಜನರು ಕಂಗೆಟ್ಟಿದ್ದಾರೆ. ಈ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಅವಶ್ಯಕತೆ ಇದೆ.
ಎಂ.ಆರ್.ಉಮೇಶ್, ಸೂಲಿಬೆಲೆ

ಅನ್ನಭಾಗ್ಯ ಹಣ ನನ್ನ ಉಳಿತಾಯ ಖಾತೆಗೆ ಬಂದಿದೆ ಖಾತೆ ಸಕ್ರಿಯವಿಲ್ಲದ ಕಾರಣದಿಂದ ಬ್ಯಾಂಕ್ ಆ ಹಣವನ್ನು ಕಡಿತ ಮಾಡಿಕೊಂಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಮಾಡಿದ್ದಾರೆ. ಸರ್ಕಾರ ಒಂದು ಕೈನಲ್ಲಿ ಕೊಟ್ಟರೆ ಬ್ಯಾಂಕ್‌ನವರು ಮತ್ತೊಂದು ಕೈನಲ್ಲಿ ಹಣ ಕಿತ್ತುಕೊಂಡಿದ್ದಾರೆ.
ಮನ್ಸೂರ್‌ಬೇಗಮ್, ಗೃಹಿಣಿ, ಸೂಲಿಬೆಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net