ಸುಲತಾ ಹೆಗ್ಡೆ ಸಾಲಿಗ್ರಾಮ ಪಪಂ ಅಧ್ಯಕ್ಷೆ

ayke new
Published on

ಕೋಟ: ಸಾಲಿಗ್ರಾಮ ಪಟ್ಟಣಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ಸುಲತಾ ಹೆಗ್ಡೆ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅನುಸೂಯ ಆನಂದರಾಮ ಹೇರ್ಳೆ ಆಯ್ಕೆಯಾಗಿದ್ದಾರೆ.

ಅದರಂತೆ ಅಪರಾಹ್ನ 2.30ಕ್ಕೆ ಚುನಾವಣಾ ಪ್ರಕ್ರಿಯೆಗೆ ಚುನಾವಣಾ ಅಧಿಕಾರಿ ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ ವೇಗ ನೀಡಿದರು. ಅಧ್ಯಕ್ಷರಾಗಿ ಸುಲತಾ ಹೆಗ್ಡೆ ಅವಿರೋಧವಾಗಿ ಆಯ್ಕೆಗೊಂಡರೆ,

ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಅನುಸೂಯ ಆನಂದರಾಮ ಹೇರ್ಳೆ, ಕಾಂಗ್ರೆಸ್‌ನಿಂದ ಝಾಹೀರಾ ಹಬೀಬ್ ನಾಮಪತ್ರ ಸಲ್ಲಿಸಿದರು. ಒಟ್ಟು 16 ಸದಸ್ಯರ ಬಲದ ಪಪಂನಲ್ಲಿ ಬಿಜೆಪಿ 10, ಕಾಂಗ್ರೆಸ್ 5, 1ಸ್ಥಾನ ಪಕ್ಷೇತರ ಹೊಂದಿದ್ದು, ಬಿಜೆಪಿಯ ಅನುಸೂಯ ಆನಂದರಾಮ ಹೇರ್ಳೆ ಆಯ್ಕೆಯಾಗಿದ್ದಾರೆ.

ಸಂವಿಧಾನ ಆಶಯದಂತೆ ಮಹಿಳಾ ಮೀಸಲಾತಿ ಈ ಪಪಂ ಬಂದೊದಗಿದೆ. ಇದನ್ನು ಸಮರ್ಥವಾಗಿ, ಪಾರದರ್ಶಕವಾಗಿ, ಭ್ರಷ್ಟಾಚಾರ ಮುಕ್ತವಾಗಿ, ಪ್ರಾಮಾಣಿಕವಾಗಿ ನಿಭಾಯಿಸಬೇಕಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿವಿಮಾತು ಹೇಳಿದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ, ಮಾಜಿ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಜಿಪಂ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಬ್ರಹ್ಮಾವರ ತಾಪಂ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ, ಪಕ್ಷದ ಮುಖಂಡರಾದ ಕಿರಣ್ ಕುಮಾರ್ ಕೊಡ್ಗಿ, ಸುರೇಶ್ ಶೆಟ್ಟಿ, ವಸಂತ ಕಾಂಚನ್, ಮಾಧವ ಕಾರ್ಕಡ, ಜಯಾನಂದ ಪೂಜಾರಿ, ಗುಣರತ್ನ ಪೂಜಾರಿ, ಪಪಂ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಸ್ವಚ್ಛ ಸುಂದರ ಸಾಲಿಗ್ರಾಮದ ಕನಸು ನನಸಾಗಿಸಲು ಪಣತೊಟ್ಟಿದ್ದೇನೆ. ಮುಖ್ಯವಾಗಿ ಒಳಚರಂಡಿ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಹಲವು ಹೊಸ ಕಾರ್ಯಕ್ರಮಗಳನ್ನು ಸ್ಥಳೀಯ ಶಾಸಕ ಹಾಗೂ ಸಂಸದೆ ನೆರವಿನೊಂದಿಗೆ ಮಾಡುತ್ತೇನೆ.

ಸುಲತಾ, ಸಾಲಿಗ್ರಾಮ ಪುರಸಭೆ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net