ಇವರಿಗೆ ತಲುಪ್ತಿಲ್ಲ ಸರ್ಕಾರದ ಗ್ಯಾರಂಟಿ

sulageri
Published on

ಸುಭಾಸ ಧೂಪದಹೊಂಡ ಕಾರವಾರ

ರಾಜ್ಯ ಸರ್ಕಾರ ಬಿಪಿಎಲ್ ಕುಟುಂಬದ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿಯನ್ನು ವಿತರಿಸಲು ಪ್ರಾರಂಭಿಸಿ ನಾಲ್ಕು ತಿಂಗಳು ಕಳೆದಿದೆ. ಆದರೆ, ಈ ಊರಿನ ಜನರಿಗೆ ಮಾತ್ರ ಆ ಸೌಲಭ್ಯ ಸಿಕ್ಕುತ್ತಿಲ್ಲ. ಅವರಿನ್ನೂ ಐದು ಕೆಜಿ ಅಕ್ಕಿ ಪಡೆಯುತ್ತಿದ್ದಾರೆ. ಉಳಿದ ಐದು ಕೆಜಿ ಅಕ್ಕಿಯ ಬದಲು ಹಣವೂ ಅವರ ಖಾತೆಗೆ ಜಮಾ ಆಗುತ್ತಿಲ್ಲ.

ಕಾರವಾರ ಕದ್ರಾ ಸಮೀಪದ ಸುಳಗೇರಿ ಎಂಬ ಗ್ರಾಮದ ಹೆಚ್ಚಿನ ಪಡಿತರದಾರರು ಕಳೆದ ಎರಡು ತಿಂಗಳಿಂದ 5 ಕೆಜಿ ಅಕ್ಕಿಯನ್ನು ಮಾತ್ರ ಪಡೆಯುತ್ತಿದ್ದಾರೆ. ರಾಜ್ಯದ ಕಟ್ಟಕಡೆಯ ವ್ಯಕ್ತಿಗೆ ಗ್ಯಾರಂಟಿ ಯೋಜನೆ ತಲುಪಿಸುವುದು ನಮ್ಮ ಗುರಿ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಅದಕ್ಕಾಗಿ ಪ್ರತ್ಯೇಕ ಪ್ರಾಧಿಕಾರವನ್ನು ರಚನೆ ಮಾಡಿದೆ. ಆದರೆ, ಇಲ್ಲಿ ಸರ್ಕಾರದ ಮೂಲ ಉದ್ದೇಶ ಈಡೇರುತ್ತಿಲ್ಲ.

ಸಮಸ್ಯೆ ಏನು..?

ಕಾರವಾರದ ಕದ್ರಾದಿಂದ ಕೊಡಸಳ್ಳಿ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು 30 ಕಿಮೀ ದೂರದಲ್ಲಿ ಸುಳಗೇರಿ ಎಂಬ ಊರು ಸಿಗುತ್ತದೆ. ಗ್ರಾಮದಲ್ಲಿ ಸುಮಾರು 35 ಮನೆಗಳಿದ್ದು, 60 ಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಕೃಷಿಕರು ಹಾಗೂ ಕೃಷಿ ಕೂಲಿ ಕಾರ್ಮಿಕರೇ ಇರುವ ಊರು ಅದು. ವಿಚಿತ್ರ ಎಂದರೆ ಗ್ರಾಮವು ಕಾರವಾರ ತಾಲೂಕಿಗೆ ಸೇರಿಲ್ಲ. ಜೊಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟಿದೆ.

ದಟ್ಟ ಕಾಡಿನ ದಾರಿಯಲ್ಲಿ ಗುಡ್ಡ ದಾಟಿ, ನದಿ ದಾಟಿ 18 ಕಿಮೀ ಹೋದರೆ ಅವರು ಉಳವಿ ತಲುಪಬಹುದು. ಆದರೆ, ಹುಲಿ, ಕರಡಿಗಳ ಕಾಟ ಇರುವ ಕಾರಣ ಕಾಡಿನ ದಾರಿಯಲ್ಲಿ ಜನ ಹೋಗಲು ಜನರು ಹೆದರುತ್ತಿದ್ದಾರೆ. ರಸ್ತೆಗುಂಟ ಉಳವಿ ತಲುಪಬೇಕು ಎಂದರೆ ಗ್ರಾಮಸ್ಥರು 68 ಕಿಮೀ ಸುತ್ತುವರಿಯಬೇಕು.

ಈ ಹಿಂದೆ ಸಾಕಷ್ಟು ಹೋರಾಟಗಳ ಬಳಿಕ ಉಳವಿಯಿಂದ ಸುಳಗೇರಿಗೆ ರೇಶನ್ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ರೇಶನ್ ಪಡೆಯಲು ಈಗ ಬಯೋ ಮೆಟ್ರಿಕ್ ಕಡ್ಡಾಯ ಮಾಡಿದ್ದರಿಂದ ಮತ್ತೆ ಗ್ರಾಮಸ್ಥರು ಉಳವಿಗೆ ತೆರಳಬೇಕಾಯಿತು. ಸಾಕಷ್ಟು ವಿನಂತಿ ಮಾಡಿದ ಬಳಿಕ ಕದ್ರಾದ ನ್ಯಾಯಬೆಲೆ ಅಂಗಡಿಯಲ್ಲಿ ಪೋರ್ಟೆಬಲಿಟಿ ವ್ಯವಸ್ಥೆಯಲ್ಲಿ ಎರಡು ತಿಂಗಳಿಂದ ರೇಶನ್ ನೀಡಲಾಗುತ್ತಿದೆ. ಆದರೆ, 5 ಕೆಜಿ ಅಕ್ಕಿ ಮಾತ್ರ ನೀಡಲಾಗುತ್ತಿದೆ. ಇದರಿಂದ ಗ್ರಾಮಸ್ಥರು ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

ಸ್ವಂತ ವಾಹನ ಇದ್ದವರು ಉಳವಿಗೆ ಹೋಗಿ 10 ಕೆಜಿ ರೇಶನ್ ಪಡೆದು ಬಂದರು. ಆದರೆ, ಬಹುತೇಕರಿಗೆ ಅದು ಸಾಧ್ಯವಾಗಿಲ್ಲ. ಇದರಿಂದ 5 ಕೆಜಿ ಮಾತ್ರ ಅಕ್ಕಿ ಪಡೆಯುತ್ತಿದ್ದೇವೆ ಎಂದು ಗ್ರಾಮಸ್ಥ ನಾಗರಾಜ ನಾಯ್ಕ ಸಮಸ್ಯೆ ತೋಡಿಕೊಂಡರು.

ನಮ್ಮ ಊರಿಗೆ ಸರ್ಕಾರದ ಸೌಲಭ್ಯಗಳೇ ಸಿಕ್ಕಿಲ್ಲ. ಚುನಾವಣೆ ಬಂದಾಗ ಬರುವ ಜನಪ್ರತಿನಿಧಿಗಳೂ ನಂತರ ಇತ್ತ ಮುಖ ಹಾಕುವುದಿಲ್ಲ. ಸರ್ಕಾರ ಘೋಷಣೆ ಮಾಡಿದಷ್ಟು ರೇಶನ್ ಸಿಗುವುದಿಲ್ಲ. ಎಲ್ಲರಿಗೂ ಗೃಹಲಕ್ಷ್ಮೀ ಹಣವೂ ಬರ್ತಿಲ್ಲ. ವಿದ್ಯುತ್ ಫ್ರೀ ಇದ್ದರೂ 20 ದಿನಗಳಿಂದ ನಮ್ಮೂರಿಗೆ ಕರೆಂಟ್ ಇಲ್ಲ. ವೃದ್ಧಾಪ್ಯ ವೇತನ ಸೌಲಭ್ಯವೂ ಎಲ್ಲರಿಗೂ ಸಿಕ್ಕಿಲ್ಲ.

ನಾಗರಾಜ ನಾಯ್ಕ

ಸುಳಗೇರಿ ಗ್ರಾಮಸ್ಥ

ಸುಳಗೇರಿ ಗ್ರಾಮಸ್ಥರಿಗೆ ಪೋರ್ಟೆಬಲಿಟಿ ಮೂಲಕ ಕದ್ರಾದಲ್ಲಿ ಪಡಿತರ ಪಡೆಯಲು ಅನುವು ಮಾಡಿಕೊಡಲಾಗಿದೆ. ಆದರೆ, 5 ಕೆಜಿ ಮಾತ್ರ ಅಕ್ಕಿ ಕೊಡಲಾಗಿದೆ ಎಂಬ ಮಾಹಿತಿ ನಮಗಿಲ್ಲ. ಪರಿಶೀಲಿಸಿ ಸರಿ ಮಾಡಿಸಲು ಕ್ರಮ ವಹಿಸಲಾಗುವುದು.

ಮಂಜುನಾಥ ರೇವಣಕರ್

ಆಹಾರ ಇಲಾಖೆ ಉಪ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net