

ನೆಲಮಂಗಲ: ವಿಜ್ಞಾನದಿಂದ ಮಾತ್ರ ವಿಕಾಸ ಸಾಧ್ಯ ಎಂದು ಬೆಂಗಳೂರು ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಉಪನ್ಯಾಸಕಿ ಡಾ.ಭಾಗ್ಯಲಕ್ಷ್ಮೀ ಅಭಿಪ್ರಾಯಪಟ್ಟರು.
ಬೆಂಗಳೂರು ಉತ್ತರ ತಾಲೂಕು ದಾಸನಪುರದ ಆಚಾರ್ಯ ಗುರುಪರಂಪರಾ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಮಾತನಾಡಿದರು.
ಜ್ಞಾನ ಮತ್ತು ವಿಜ್ಞಾನ ದಿನನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ವಿಜ್ಞಾನವಿಲ್ಲದ ಜೀವನ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅನೇಕ ವರ್ಷಗಳ ಕಾಲ ಅವಿರತವಾಗಿ ಶ್ರಮಿಸಿ ಹೊಸ ಅವಿಷ್ಕಾರ ಕೊಡುಗೆಯಾಗಿ ನೀಡಿದ ಎಲ್ಲ ವಿಜ್ಞಾನಿಗಳ ಕಾರ್ಯವನ್ನು ಶ್ಲಾಸಿದರು.
ಸಂಶೋಧನೆ ಹಾಗೂ ಸಾಧನೆ ಬಗ್ಗೆ ಸ್ಮರಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ವಸ್ತು ವಿಷಯಗಳನ್ನು ಏಕಾಗ್ರತೆಯಿಂದ ಸೂಕ್ಷ್ಮವಾಗಿ ವೀಕ್ಷಿಸಿ ಪ್ರಯೋಗಾತ್ಮಕವಾಗಿ ಅಧ್ಯಯನ ಮಾಡಿದಾಗ ಸಂಶೋಧನೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬದಲಾವಣೆ ಜಗದ ನಿಯಮವಾಗಿದ್ದು, ಜೀವನಕ್ಕೆ ಪೂರಕವಾದ ಬದಲಾವಣೆ ವೈಜ್ಞಾನಿಕತೆಯಿಂದ ಸಾಧ್ಯ. ಪ್ರಸ್ತುತ ದಿನಗಳಲ್ಲಿ ತ್ಯಾಜ್ಯವಸ್ತುಗಳ ವಿಲೇವಾರಿ ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದು, ವೈಜ್ಞಾನಿಕ ತಂತ್ರಜ್ಞಾನದಿಂದ ಸಮರ್ಪಕ ವಿಲೇವಾರಿ ಮಾಡುವ ಮತ್ತು ಮರುಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ಶಾಲಾ ಅಧ್ಯಕ್ಷ ಎನ್.ರಂಗಚಾರ್ ಮಾತನಾಡಿ ವಿಜ್ಞಾನತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳಾ ವಿಜ್ಞಾನಿಗಳ ಅನೇಕ ಸಂಶೋಧನೆ ಮತ್ತು ಸಾಧನೆ ಮಾಡಿದ್ದಾರೆ. ವಿಜ್ಞಾನದ ಬೆಳವಣಿಗೆ ಮೇಲೆ ರಾಷ್ಟ್ರದ ಪ್ರಗತಿ ಸಾಧ್ಯ. ಭಾರತೀಯರಲ್ಲಿನ ಕಠಿಣ ಪರಿಶ್ರಮ, ವೈಜ್ಞಾನಿಕ ಮನೋಭಾವ ಹಾಗೂ ಕೌಶಲಗಳಿಂದ ಕೂಡಿದ ಸಂಶೋಧನೆಗಳನ್ನು ಇಡೀ ಜಗತ್ತು ಗೌರವಿಸುತ್ತಿದೆ ಎಂದರು.
ವಿಜ್ಞಾನ ವಿಷಯ ಅಧ್ಯಯನ ಕಷ್ಟವೆಂದು ಭಾವಿಸಲಾಗಿದೆ. ಆಸಕ್ತಿ, ಶ್ರದ್ಧೆಯ ಅಧ್ಯಯನ ವಿಜ್ಞಾನ ವಿಷಯ ಕಲಿಕೆ ಸುಲಭವಾಗಲಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರಯೋಗಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬೋಧನೆ ಮಾಡಿದಲ್ಲಿ ವಿಜ್ಞಾನದ ಪರಿಕಲ್ಪನೆ ಸುಲಭವಾಗಿ ಅರ್ಥ ಮಾಡಿಸಬಹುದಾಗಿದೆ ಎಂದು ಮುಖ್ಯಶಿಕ್ಷಕಿ ಡಿ.ಆರ್.ಭವ್ಯಾ ತಿಳಿಸಿದರು.
ಚಿಕ್ಕಂದಿನಲ್ಲಿಯೇ ವಿದ್ಯಾರ್ಥಿಗಳು ಕುತೂಹಲ ಪ್ರಜ್ಞೆಯನ್ನು ಬೆಳೆಸಿಕೊಂಡಲ್ಲಿ ಸಂಶೋಧನೆ ಮಾಡಬಹುದಾಗಿದೆ ಎಂದರು.
ವಿಜ್ಞಾನ ವಸ್ತುಪ್ರದರ್ಶನ: ಶಾಲೆಯ ಮುಖ್ಯಶಿಕ್ಷಕಿ ಹಾಗೂ ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಸಂಶೋಧನೆಗೆ ಸಂಬಂಧಿಸಿದಂತಹ ವಿಜ್ಞಾನ ವಿಷಯದ ಪ್ರಯೋಗಾತ್ಮಕ ಚಿತ್ರ ರಚಿಸಿದ್ದರು. ವೈಜ್ಞಾನಿಕ ಮಾದರಿ ತಯಾರಿಸಿ ಪ್ರದರ್ಶಿಸಿದರು. ಇದು ಮುಖ್ಯ ಅತಿಥಿಗಳ ಪ್ರಶಂಸೆಗೂ ಪಾತ್ರವಾಯಿತು. ರಾಷ್ಟ್ರೀಯ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪ್ರಶಂಸಿದರು.