ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಅಗತ್ಯ, ಸುಕನ್ಯಾ ಸುರಕ್ಷಾ ಎಚ್ ಪಿವಿ ಚುಚ್ಚುಮದ್ದು ಅಭಿಯಾನಕ್ಕೆ ಚಾಲನೆ

IMG-20250107-WA0012-1.jpg
Published on

ಹುಬ್ಬಳ್ಳಿ: ವೈದ್ಯರು ಹಾಗೂ ವೈದ್ಯಕಿಯ ಸಿಬ್ಬಂದಿಯು ಎಂತಹ ಸಂಕಷ್ಟದ ಕಾಲದಲ್ಲಿಯೂ ಜೀವದ ಹಂಗು ತೊರೆದು ಇನ್ನೊಬ್ಬರ ಜೀವ ರಕ್ಷಣೆಯ ಕಾರ್ಯ ಮಾಡುತ್ತಾರೆ ಎಂಬುದಕ್ಕೆ ಕರೊನಾ ಸಂದರ್ಭ ಸಾಕ್ಷಿಯಾಗಿದೆ. ಇದೀಗ ಗರ್ಭಕಂಠದ ಕ್ಯಾನ್ಸರ್ ಬರದಂತೆ ಚುಚ್ಚುಮದ್ದು ನೀಡುವ ಅಭಿಯಾನವನ್ನು ರೋಟರಿ ಕ್ಲಬ್ ಜತೆಗೂಡಿ ಹಮ್ಮಿಕೊಂಡಿದ್ದು, ಇದಕ್ಕೆ ನಮ್ಮ ಸಂಸ್ಥೆಯು ಕೈಜೋಡಿಸಿರುವುದು ಹೆಮ್ಮೆಯ ಸಂಗತಿ ಎಂದು ವಿಆರ್ ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಹೇಳಿದರು.

ನಗರದ ತತ್ವದರ್ಶ ಆಸ್ಪತ್ರೆಯಲ್ಲಿ ಮಂಗಳವಾರ ವಿಆರ್ ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ವಿವಿಧ ರೋಟರಿ ಕ್ಲಬ್‌ಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಗರ್ಭಕಂಠದ ಕ್ಯಾನ್ಸರ್ ಗೆ "ಸುಕನ್ಯಾ ಸುರಕ್ಷಾ' ಎಚ್ ಪಿವಿ ಉಚಿತ ಚುಚ್ಚುಮದ್ದು ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಎಂಟು ನಿಮಿಷಕ್ಕೆ ಒಬ್ಬ ಮಹಿಳೆ ಈ ಕಾಯಿಲೆಯಿಂದ ಮರಣ ಹೊಂದುತ್ತಾರೆ ಎಂಬುದು ಆಘಾತಕಾರಿ ಸಂಗತಿ. ಇದನ್ನು ತಡೆಗಟ್ಟುವುದು ಅಗತ್ಯ. ಆರೋಗ್ಯ, ಶಿಕ್ಷಣ, ಕ್ರೀಡಾ ಕ್ಷೇತ್ರಗಳಿಗೆ ವಿಆರ್ ಎಲ್ ಸಿಎಸ್ಆರ್ ನಿಧಿ ಅಡಿ ಕಳೆದ ಹಲವು ವರ್ಷಗಳಿಂದ ಬೆಂಬಲ ನೀಡುತ್ತ ಬರಲಾಗಿದೆ. ಇದೀಗ ಚುಚ್ಚುಮದ್ದು ಅಭಿಯಾನಕ್ಕೆ ಕೈಜೋಡಿಸಿದೆ ಎಂದರು.

ಇಂತಹ ಅಪಾಯಕಾರಿ ಕಾಯಿಲೆಗಳ ಬಗ್ಗೆ ಸಮಾಜದಲ್ಲಿ ತಿಳಿವಳಿಕೆ ಕಡಿಮೆ ಇದೆ. ಈ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಆಗಲಿದೆ. ಇದರಿಂದ ಸಾವುಗಳನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ವಿಆರ್ ಎಲ್ ಮೀಡಿಯಾ ನಿರ್ದೇಶಕರಾದ ಶ್ರೀಮತಿ ವಾಣಿ ಆನಂದ ಸಂಕೇಶ್ವರ ಮಾತನಾಡಿ, ಮಹಿಳೆಯರ ಆರೋಗ್ಯ ಸುಧಾರಿಸುವ ಮಹತ್ವದ ಅಭಿಯಾನಕ್ಕೆ ಬೆಂಬಲಿಸುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ. ಚುಚ್ಚುಮದ್ದಿನ ಬಗ್ಗೆ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸಬೇಕು. ಗರ್ಭಕಂಠದ ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣವೇ ಅಭಿಯಾನದ ಗುರಿ ಎಂದು ಹೇಳಿದರು.

ಎಸ್ ಡಿ ಎಂ ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ. ರತ್ನಮಾಲಾ ದೇಸಾಯಿ ಮಾತನಾಡಿ, ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇದು ಇನ್ನಷ್ಟು ವೇಗ ಪಡೆಯಬೇಕು ಎಂದರು.

ಯೋಜನೆಯ ಸಂಯೋಜಕಿ ಡಾ. ಕಸ್ತೂರಿ ಡೋಣಿಮಠ ಮಾತನಾಡಿ, ಹ್ಯೂಮನ್ ಪ್ಯಾಪಿಲೋಮ್ ವೈರಸ್ ಎಚ್ ಪಿವಿ ಚರ್ಮದಿಂದ ಚರ್ಮಕ್ಕೆ ಪ್ರಸರಣವಾಗುವ ಕಾಯಿಲೆ, ಇದನ್ನು ಮುಂಜಾಗ್ರತೆಯ ಮೂಲಕ ತಡೆಗಟ್ಟಬಹುದು. ಈ ಚುಚ್ಚುಮದ್ದನ್ನು ಹೆಣ್ಣು ಮಕ್ಕಳಿಗೆ ಪಾಲಕರು ಕೊಡುಗೆಯಾಗಿ ನೀಡಿದರೆ ಭವಿಷ್ಯದಲ್ಲಿ ಇಂತಹ ಕಾಯಿಲೆಯಿಂದ ದೂರ ಇರಬಹುದು ಎಂದರು.

ಯೋಜನೆಯ ಮುಖ್ಯಸ್ಥೆ ರೋಟರಿ ಕ್ಲಬ್‌ನ ಡಾ. ಮಹಿಮಾ ದಂಡ ಮಾತನಾಡಿ, ಚುಚ್ಚುಮದ್ದು ಅತ್ಯಂತ ಯಶಸ್ವಿ ಹಾಗೂ ಸುರತವಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈ ಅಭಿಯಾನಕ್ಕೆ ವಿಆರ್ ಎಲ್ ಪ್ರಾಯೋಜಕತ್ವ ವಹಿಸಿದೆ. ಸಾವಿರ ಚುಚ್ಚುಮದ್ದು ನೀಡಲಾಗುತ್ತಿದೆ ಎಂದರು.

ತತ್ವದರ್ಶ ಹೆಲ್ತಕೇರ್ ಚೇರ್ಮನ್ ಡಾ. ಸಂಜೀವ ಕುಲಗೋಡ ಮಾತನಾಡಿದರು.
ವ್ಯಾಕ್ಸಿನ್ ಪೂರೈಕೆ ಮಾಡುತ್ತಿರುವ ಸೇರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಪ್ರಾದೇಶಿಕ ಬಿಜಿನೆಸ್ ಮ್ಯಾನೇಜರ್ ಹರಿನಾರಾ ಸೂದ್ ಹಾಗೂ ಇತರರನ್ನು ಸನ್ಮಾನಿಸಲಾಯಿತು.

ರೂಪಾ ಮೆಹ್ತಾ, ಸದಾನಂದ, ವರುಣ ಪಾಟೀಲ, ಡಾ. ಎಸ್.ಪಿ. ಬಳಿಗಾರ, ಡಾ. ಈಶ್ವರ ಹೊಸಮನಿ, ವಿನಿತಾ ಪಾಟೀಲ, ಇತರರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಡಾ. ನಾಗರೇಖಾ ಹೆಬಸೂರ ಪ್ರಾಸ್ತಾವಿಕ ಮಾತನಾಡಿದರು. ಶ್ರೀವಲ್ಲಿ ಹೆಬಸೂರ ಪ್ರಾರ್ಥನೆ ಹಾಡಿದರು. ಡಾ. ಶೀತಲ ಕುಲಗೋಡ ಕಾರ್ಯಕ್ರಮ ನಿರೂಪಿಸಿದರು. ಡಾ. ರಮಾ ದೇಸಾಯಿ ಪರಿಚಯಿಸಿದರು. ರೋಟರಿ ಕ್ಲಬ್‌ನ ರಾಜೇಶ್ವರಿ ವಾಸುಕಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net