3 ತಿಂಗಳಲ್ಲಿ 5 ಕೋಟಿ ಲಸಿಕೆ ಗುರಿ; ಈವರೆಗೂ 3 ಕೋಟಿ ಜನರಿಗೆ ವಿತರಣೆ, ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ

25CBP_01 D
Published on

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಇದುವರೆಗೆ 3 ಕೋಟಿ ಜನರು ಕರೊನಾ ಲಸಿಕೆ ಪಡೆದಿದ್ದು, ಮುಂದಿನ 2-3 ತಿಂಗಳಲ್ಲಿ 5 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಲಸಿಕೆ ಮೆಗಾ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ ನಂದಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎರಡು ಡೋಸ್ ಲಸಿಕೆ ಪಡೆದವರು ಕರೊನಾದಿಂದ ರಕ್ಷಣೆ ಪಡೆಯಬಹುದು. ಎರಡು ಡೋಸ್ ಪಡೆದವರಲ್ಲಿ ತೀವ್ರತರವಾದ ಸಮಸ್ಯೆ ಬಂದಿಲ್ಲ. ಅಪಪ್ರಚಾರದಿಂದ ಗೊಂದಲಕ್ಕೀಡಾದ ಜನರು ಈಗ ಸ್ವಯಂಪ್ರೇರಣೆಯಿಂದ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ ಎಂದರು.

ಮಳೆಗಾಲದಲ್ಲಿ ಡೆಂಘೆ, ಚಿಕೂನ್‌ಗುನ್ಯಾ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಹಿನ್ನೆಲೆಯಲ್ಲಿ ಈಗಾಗಲೇ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮುಂಜಾಗ್ರತೆ ವಹಿಸಲು ಸೂಚನೆ ನೀಡಿರುವುದಾಗಿ ತಿಳಿಸಿದ ಸಚಿವರು, ಪ್ರವಾಹಪೀಡಿತ ಭಾಗದ ಜನರಿಗೆ ಅಗತ್ಯ ಔಷಧಗಳನ್ನು ರವಾನೆ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ, ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸುವ ಜತೆಗೆ ರೈತರಿಗೆ ಸೌಲಭ್ಯಗಳನ್ನು ತಲುಪಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಪಂ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಸ್, ಎಂಪಿಎಲ್ ಸ್ಫೋರ್ಟ್ಸ್ ಫೌಂಡೇಷನ್ ಮುಖ್ಯಸ್ಥ ಸುರೇರ್ ವೈದ್ಯನಾಥ್ ಹಾಗೂ ಇತರರಿದ್ದರು.

ಎಂಪಿಎಲ್ ಸಂಸ್ಥೆಗೆ ಶ್ಲಾಘನೆ: ಎಂಪಿಎಲ್ ಸ್ಫೋಟ್ಸ್ ಸಂಸ್ಥೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 10 ಸಾವಿರ ಜನರಿಗೆ ಉಚಿತವಾಗಿ ಲಸಿಕೆ ನೀಡುತ್ತಿದೆ. ಮೊದಲ ಹಂತವಾಗಿ 2,500 ಮಂದಿಗೆ ನೀಡಿದ್ದಾರೆ. ಈ ಸಂಸ್ಥೆ ರಾಜ್ಯಾದ್ಯಂತ 1 ಲಕ್ಷ ಜನರಿಗೆ ಉಚಿತವಾಗಿ ಲಸಿಕೆ ನೀಡಿದ್ದು, ಇದಕ್ಕೆ ತಗುಲುವ ಸಂಪೂರ್ಣ ವೆಚ್ಚವನ್ನು ಸಂಸ್ಥೆಯೇ ಭರಿಸುತ್ತಿದೆ ಎಂದು ಎಂಪಿಎಲ್ ಸಂಸ್ಥೆ ಸಾಮಾಜಿಕ ಸೇವೆಯನ್ನು ಸುಧಾಕರ್ ಶ್ಲಾಸಿದರು.

ಮೂಲಸೌಲಭ್ಯ ಒದಗಿಸಲು ಒತ್ತು: ಜಿಲ್ಲೆಯಲ್ಲಿ ನೀರಾವರಿ ಸೇರಿ ಮೂಲಸೌಲಭ್ಯಗಳಿಗೆ ಒತ್ತು ನೀಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಡಿಎಂಎ್ಟಿ ಯೋಜನೆಯಡಿ 50 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳನ್ನು ರೂಪಿಸಿರುವ ಜತೆಗೆ ಸರ್ಕಾರವೂ ನೀರಾವರಿಗೆ ವಿಶೇಷ ಆಸಕ್ತಿ ತೋರುತ್ತಿದೆ. ತಾಲೂಕಿನ ನಂದಿ ಹೋಬಳಿಯಲ್ಲಿ ನೀರಿನ ಸಮಸ್ಯೆ ಗಮನಕ್ಕೆ ಬಂದಿದ್ದು, ದೊಡ್ಡಮರಳಿ, ಅಂಗಟ್ಟ ಸೇರಿ ಈ ಭಾಗದ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಮತ್ತೊಮ್ಮೆ ಕೇಂದ್ರಕ್ಕೆ ಮನವಿ : ಎತ್ತಿನಹೊಳೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಿ ಬಯಲುಸೀಮೆ ಜಿಲ್ಲೆಗಳಲ್ಲಿ ನೀರಾವರಿಗೆ ಆದ್ಯತೆ ನೀಡಬೇಕೆಂದು ಹಾಗೂ ಜಿಲ್ಲೆಗೆ ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ಕೈಗಾರಿಕೆಗಳು ಆರಂಭವಾಗುವ ನಿಟ್ಟಿನಲ್ಲಿ ಇತ್ತೀಚಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಸುಧಾಕರ್ ಭರವಸೆಯಿತ್ತರು.

ಸೌಲಭ್ಯ ವಿತರಣೆ : ಕಾರ್ಮಿಕ ಇಲಾಖೆ, ರಾಜ್ಯ ಕಟ್ಟಡ ಮತ್ತು ಇತರ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಹಾಗೂ ಇತರ ನಿರ್ಮಾಣ, ವಲಸೆ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಕೃಷಿ ಇಲಾಖೆಯಿಂದ ವಿವಿಧ ಯೋಜನೆ ಮತ್ತು ಸೌಲಭ್ಯಗಳ ಕುರಿತಾದ ಪ್ರಚಾರ ವಾಹನಗಳಿಗೆ ಸಚಿವ ಡಾ.ಕೆ.ಸುಧಾಕರ್ ಅವರು ಚಾಲನೆ ನೀಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಗರಿಷ್ಠ ಅಂಕ ಪಡೆದ 153 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗರಸಭೆಯಿಂದ ಪ್ರೋತ್ಸಾಹಧನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net