

ಬಂಟ್ವಾಳ: ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಇದರ ಹುಲಿಗಳು ಸಮಾಜದಲ್ಲಿರುವ ಕೆಟ್ಟದ್ದನ್ನು ವಿರೋಧಿಸಿ ಗರ್ಜಿಸುವ ಹುಲಿಗಳಾಗಬೇಕು, ಆ ಮೂಲಕ ಹಿಂದೂ ಧರ್ಮದ ಸಂಸ್ಕೃತಿ, ಪರಂಪರೆ ಉಳಿಸುವ ಕಾರ್ಯ ಆಗಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.
ಉದ್ಯಮಿ ಲಕ್ಷ್ಮೀ ಗಣೇಶ್ ಅವರ ಸಹಕಾರದೊಂದಿಗೆ ನಾಗರಾಜ್ ಕಲ್ಲಡ್ಕ ನೇತೃತ್ವದ ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಇದರ 6ನೇ ವರ್ಷದ ಸಂಭ್ರಮಾಚರಣೆಯ ಸಾಂಪ್ರದಾಯಿಕ ದಸರಾ ಹುಲಿಗಳು- 2024ರ ಹುಲಿವೇಷಕ್ಕೆ ಊದು ಹಾಕುವ ಕಾರ್ಯಕ್ರಮದ ನಿಮಿತ್ತ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕದ ಪ್ರಮುಖರು ಉದ್ಯಮಿ ರಾಜೇಂದ್ರ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಹುಲಿ ವೇಷಧಾರಿ ಡೊಂಬಯ್ಯ ಟೈಲರ್ ಕಲ್ಲಡ್ಕ, ಹುಲಿವೇಷದಲ್ಲಿ ಅಕ್ಕಿಮುಡಿ ಹಾರಿಸುವ ಪುರುಷೋತ್ತಮ ಮಾಣಿಮಜಲು, ಚಿತ್ರ ಕಲಾವಿದ ಯೋಗೀಶ್ ಆಚಾರ್ಯ ಮೊದಲಾದವರನ್ನು ಗೌರವಿಸಲಾಯಿತು. ಕಲ್ಲಡ್ಕ ವ್ಯಾಪ್ತಿಯಲ್ಲಿ ವಿವಿಧ ರೀತಿಯ ಸಮಾಜ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಸುಮಾರು 44 ಸಂಘ ಸಂಸ್ಥೆಗಳನ್ನು ಗೌರವಿಸಲಾಯಿತು.
ವಿಶ್ವ ಹಿಂದು ಪರಿಷತ್ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಪುತ್ತೂರು ಪಿಲಿಗೊಬ್ಬು ರೂವಾರಿ ಸಹಜ್ ರೈ, ವಿಹಿಂಪ ವಿಭಾಗ ಸಂಚಾಲಕ ಪುನೀತ್ ಅತ್ತಾವರ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಲ್ಲಡ್ಕ ಶ್ರೀರಾಮ ಮಂದಿರದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ನಿತ್ಯಾನಂದ ಆಶ್ರಮದ ಗಣಪತಿ ಸ್ವಾಮಿ, ಹಿಂದು ಮುಖಂಡ ಮಿಥುನ್ ಪೂಜಾರಿ ಕಲ್ಲಡ್ಕ, ರಂಜನ್ ಬಲ್ಯಾಯ ಮೊದಲಾದವರು ಉಪಸ್ಥಿತರಿದ್ದರು.
ಮೈಸೂರು ರಾಮಚಂದ್ರ ಆಚಾರ್ಯರಿಂದ ನಡೆದ ದಾಸವಾಣಿ ಕಾರ್ಯಕ್ರಮ ಹಾಗೂ ಸ್ಥಳೀಯ ತಂಡಗಳ ಕುಣಿತ ಭಜನೆ ಮನಸೂರೆಗೊಂಡಿತು. ಒಂದರಿಂದ ಒಂಬತ್ತು ವರ್ಷದ ಮಕ್ಕಳಿಗೆ ಬಾಲ ಭೋಜನ ಜರುಗಿತು.
ನಾಗಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕದ ಮುಖ್ಯಸ್ಥ ನಾಗರಾಜ್ ಕಲ್ಲಡ್ಕ ಸ್ವಾಗತಿಸಿದರು, ಪ್ರಜಿತ್ ಕೆಂಪುಗುಡ್ಡೆ ವಂದಿಸಿದರು. ಗೋಪಾಲ್ ಬಲ್ಯಾಯ ಕಲ್ಲಡ್ಕ ಹಾಗೂ ಉದಯ ಕೆಲಿಂಜ ಕಾರ್ಯಕ್ರಮ ನಿರೂಪಿಸಿದರು.