

ಕಳಸ: ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಓದು ನಿಲ್ಲಿಸಬಾರದು ಎನ್ನುವ ಉದ್ದೇಶದಿಂದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸುಜ್ಞಾನನಿಧಿ ಶಿಷ್ಯ ವೇತನ ಪ್ರಾರಂಭಿಸಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಹೇಳಿದರು.
ಕಳಸ ಮಹಾವೀರ ಭವನದಲ್ಲಿ ನಡೆದ ಸುಜ್ಞಾನನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಸಂಸ್ಥೆಯಿಂದ ಶಿಕ್ಷಕರನ್ನು ನೀಡಿ ಅವರ ಗೌರವಧನ ಭರಿಸುತ್ತದೆ. ಶಾಲೆಗೆ ಬೇಕಾದ ಪೀಠೋಪಕರಣಗಳನ್ನು ನೀಡುತ್ತಿದೆ. ಓದುವ ಸಂದರ್ಭದಲ್ಲಿ ಬೇರೆ ಆಲೋಚನೆಗಳಿಗೆ ಮನಸ್ಸು ನೀಡಿ, ಮುಂದೆ ಬರುವ ಸುಂದರ ದಿನಗಳನ್ನು ಹಾಳು ಮಾಡಿಕೊಳ್ಳಬಾರದು ಎಂದು ಹೇಳಿದರು. ಕಳಸ ಭಾಗದ 46 ಮಂದಿ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯ ವೇತನ ವೇತನ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಲಾಯಿತು.
ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ವಿಶ್ವನಾಥ್, ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ವ್ಯಕ್ತಿ ಸಾವಿತ್ರಿ, ಸುಜಯ ಸದಾನಂದ ಶೌರ್ಯ ವಿಪತ್ತು ಘಟಕದ ಮಾಸ್ಟರ್ ಮಹೇಶ್, ಶೌರ್ಯ ವಿಪತ್ತು ಘಟಕದ ಕ್ಯಾಪ್ಟನ್ ಅಜಿತ್ ಕುಲಾಲ್, ಒಕ್ಕೂಟದ ಅಧ್ಯಕ್ಷ ಸುನಿಲ್ ಹಳುವಳ್ಳಿ, ಒಕ್ಕೂಟ ಕಾರ್ಯದರ್ಶಿ ಕುಸುಮ, ಯೋಜನಾಧಿಕಾರಿ ಸುರೇಶ್, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.