

ಉಡುಪಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸರ್ಕಾರ ಮಾಡಲಾಗದಂತಹ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದರು.
ಶನಿವಾರ ತಾಲೂಕಿನ ಪ್ರಗತಿ ಸೌಧದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀಡಲಾದ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ಪ್ರಸ್ತುತ ವರ್ಷದಲ್ಲಿ ಉಡುಪಿ ತಾಲೂಕಿನ 110 ವಿದ್ಯಾರ್ಥಿಗಳಿಗೆ 10.22 ಲಕ್ಷ ರೂ. ಸುಜ್ಞಾನ ನಿಧಿ ಮಂಜೂರಾಗಿದ್ದು, ಮಂಜೂರಾತಿ ಪತ್ರವನ್ನು ವಿತರಿಸಿದರು.
ಮುಖ್ಯ ಅತಿಥಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿಕ್ಷಣ ಇಲಾಖೆಗೆ ಒಂದು ಶಕ್ತಿ. ಯೋಜನೆ ಮೂಲಕ ವಿವಿಧ ಶಾಲೆಗಳಿಗೆ ಹಲವಾರು ರೀತಿಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಅನೇಕ ಕಡೆಗಳಲ್ಲಿ ಶಿಕ್ಷಕರನ್ನು ನೇಮಿಸಿದೆ ಎಂದು ಹೇಳಿದರು.
ಉಡುಪಿ ತಾಲೂಕಿನ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸತ್ಯಾನಂದ್ ನಾಯಕ್ ಮಾತನಾಡಿ, ದುಶ್ಚಟಗಳಿಂದ ಆನೇಕ ಸಾಮಾಜಿಕ ಸಮಸ್ಯೆಗಳು ಎದುರಾಗುತ್ತಿದ್ದು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಮೇಲೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕು ಎಂದು ಸಲಹೆಯನ್ನು ನೀಡಿದರು,
ಯೋಜನೆ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಯೋಜನೆಯ ವಿವಿಧ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಶಿವಕುಮಾರ್ ಮಾತನಾಡಿದರು.
ಯೋಜನೆ ಕೇಂದ್ರ ಒಕ್ಕೂಟ ಅಧ್ಯೆ ಶಮಿತಾ ಪಿ. ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಕರಾವಳಿ ಪ್ರಾದೇಶಿಕ ವ್ಯಾಪ್ತಿಯ ಆಡಳಿತ ಯೋಜನಾಧಿಕಾರಿ ಪುರಂದರ, ಕಚೇರಿ ತಪಾಸಣಾ ಯೋಜನಾಧಿಕಾರಿ ಅಮರ್ ಪ್ರಸಾದ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತಾ, ವಿಚಕ್ಷಣಾ ಧಿಕಾರಿ ಸರಸ್ವತಿ ಉಪಸ್ಥಿತರಿದ್ದರು.
ಉಡುಪಿ ತಾಲೂಕಿನ ಯೋಜನಾಧಿಕಾರಿ ರಾಮ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಂಬಲ್ಪಾಡಿ ಮೇಲ್ವಿಚಾರಕಿ ಪ್ರೇಮಾ ಕಾರ್ಯಕ್ರಮ ನಿರೂಪಿಸಿದರು. ನಿಟ್ಟೂರು ಸೇವಾ ಪ್ರತಿನಿಧಿ ಗೀತಾ ಪಾಲನ್ ವಂದಿಸಿದರು.