

ಹಿರೀಸಾವೆ: ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ಜತೆಗೆ ವಿವಿಧ ಯೋಜನೆಗಳನ್ನು ರೂಪಿಸಿ ಗ್ರಾಮೀಣ ಜನತೆಯ ಬದುಕನ್ನು ಸದೃಢಗೊಳಿಸುವಲ್ಲಿ ಶ್ರಮಿಸುತ್ತಿರುವ ಹೆಗ್ಗಳಿಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸಲ್ಲುತ್ತದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಹೋಬಳಿಯ ಪುರ ಗ್ರಾಮದ ಶ್ರೀ ವೀರಭದ್ರೇಶ್ವರಸ್ವಾಮಿ ಸನ್ನಿಧಿಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೋಮವಾರ ಆಯೋಜಿಸಿದ್ದ ಶ್ರೀ ಸೋಮೇಶ್ವರಸ್ವಾಮಿ ಸಹಸ್ರ ನಾಮ ಬಿಲ್ವಾರ್ಚನೆ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಲಾ 2 ಲಕ್ಷ ರೂ. ಅನುದಾನ ಲಭ್ಯವಾಗುತ್ತಿದೆ. ಇನ್ನು ಸುಜ್ಞಾನ ನಿಧಿ ರೂಪಿಸಿ 1 ಲಕ್ಷ ಮಕ್ಕಳಿಗೆ ನೆರವಾಗಿರುವುದು ಶೈಕ್ಷಣಿಕ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಪಾಳು ಬಿದ್ದಿರುವ ಪುರಾತನ ಕಾಲದ ದೇಗುಲಗಳನ್ನು ಜೀರ್ಣೋದ್ಧಾರಗೊಳಿಸುವ ಮೂಲಕ ಧಾರ್ಮಿಕ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಯೋಜನೆಯ ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದಲ್ಲಿ ಒಟ್ಟು 60 ಲಕ್ಷ ಸದಸ್ಯರನ್ನು ಹೊಂದಿದೆ. ಹತ್ತಾರು ಯೋಜನೆಯಡಿ ಸೌಲಭ್ಯಗಳನ್ನು ನೀಡಲಾಗಿದೆ. ಯೋಜನೆ ವತಿಯಿಂದ 1.50 ಕೋಟಿ ಜನರಿಗೆ ಆಯುಷ್ಮಾನ್ ಕಾರ್ಡ್ ಹಾಗೂ 50 ಸಾವಿರ ಜನರಿಗೆ ಫಸಲ್ ವಿಮಾ ಕಾರ್ಡ್ ಕಲ್ಪಿಸಲಾಗಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ರೂಪಶ್ರೀ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮದ್ಯವರ್ಜನ ಶಿಬಿರ ಆಯೋಜಿಸಿ 40 ಸಾವಿರಕ್ಕೂ ಹೆಚ್ಚು ಜನರಲ್ಲಿ ಮದ್ಯ ಬಿಡಿಸಲಾಗಿದೆ. ಇದರಿಂದ ಹಲವು ಕುಟುಂಬಗಳ ಬದುಕಿಗೆ ಬೆಳಕು ನೀಡಿದೆ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ತೋಟಿ ಜಯರಾಮ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಆರ್.ವಾಸು, ಗ್ರಾಮ ಪಂಚಾಯಿತಿ ಸದಸ್ಯ ಪಿ.ಕೆ.ಶಿವಶಂಕರ್, ಕಬ್ಬಳಿ ಗ್ರಾಪಂ ಮಾಜಿ ಅಧ್ಯಕ್ಷ ಬಿಳಿಕೆರೆ ರಂಗೇಗೌಡ, ಸದಸ್ಯ ಆನಂದ್, ದಿಡಗ ಪಿಡಿಒ ಕೆ.ಎಸ್.ಪ್ರಕಾಶ್, ಯೋಜನಾಧಿಕಾರಿ ಕೆ.ಯಶೋಧರ, ವಲಯದ ಮೇಲ್ವಿಚಾರಕ ಹರೀಶ್, ಪ್ರಮುಖರಾದ ಮಲ್ಲೇಗೌಡ, ಇಂದ್ರಜಿತ್, ವೀರಭದ್ರಪ್ಪ, ಹರೀಶ್, ಗವೀಶ್ ಇತರರು ಇದ್ದರು.