

ಬಂಗಾರಪೇಟೆ: ತಹಸಿಲ್ದಾರ್ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟದಲ್ಲಿ ಕೆಎಟಿ ಎಸ್.ವೆಂಕಟೇಶಪ್ಪರ ಅರ್ಜಿ ವಜಾಗೊಳಿಸುವ ಮೂಲಕ ಪ್ರಸ್ತುತ ತಹಸೀಲ್ದಾರ್ ಕೆ.ಎನ್.ಸುಜಾತಾ ಅವರಿಗೆ ಕಾನೂನು ಹೋರಾಟದಲ್ಲಿ ಜಯ ದೊರೆತಿದೆ.
ಐದು ತಿಂಗಳ ಹಿಂದೆ ಬಂಗಾರಪೇಟೆ ತಹಸೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದ ಎಸ್.ವೆಂಕಟೇಶಪ್ಪ ವಿರುದ್ಧ ಹಲವು ಗಂಭೀರ ಆರೋಪಗಳು ಸಾರ್ವಜನಿಕವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಸಿಎಂ ವೆಂಕಟೇಶಪ್ಪರನ್ನು ಡಿಸಿ ಕಚೇರಿಯಲ್ಲಿ ಪುರಸಭೆ ತಹಸೀಲ್ದಾರ್ ಆಗಿ ವರ್ಗಾಯಿಸಿದ್ದರೇ, ಅವರ ಸ್ಥಾನಕ್ಕೆ ಮುಜರಾಯಿ ತಹಸೀಲ್ದಾರ್ ಆಗಿದ್ದ ಕೆ.ಎನ್.ಸುಜಾತಾರನ್ನು ಡಿ. 31ರಂದು ಸರ್ಕಾರ ನೇಮಿಸಿತ್ತು. ಇದಕ್ಕೆ ವೆಂಕಟೇಶಪ್ಪ, ಪೂರ್ಣಾವಧಿಯಲ್ಲಿ ಸೇವೆ ಮಾಡಲು ನನಗೆ ಅನುವು ಮಾಡಿಕೊಡದೆ ಅಲ್ಪಾವಧಿಯಲ್ಲೆ ವರ್ಗಾಯಿಸಲಾಗಿದೆ ಎಂದು ಪ್ರಶ್ನಿಸಿ ಕೆಎಟಿಯಲ್ಲಿ ಮನವಿ ಮಾಡಿದ್ದರು. ವೆಂಕಟೇಶಪ್ಪ ವರ್ಗಾವಣೆಗೆ ಕೆಎಟಿ ತಡೆಯಾಜ್ಞೆ ನೀಡಿತ್ತು, ಆದರೆ ಕೆ.ಎನ್.ಸುಜಾತಾ ಕುರ್ಚಿ ಬಿಟ್ಟುಕೊಡಲು ಮೂವ್ಮೆಂಟ್ ಆದೇಶ ತರುವಂತೆ ಪಟ್ಟು ಹಿಡಿದಿದ್ದರಿಂದ ಇಬ್ಬರ ನಡುವೆ ಕುರ್ಚಿಗಾಗಿ ಹಗ್ಗಜಗ್ಗಾಟ ನಡೆಯುತ್ತಿತ್ತು. ಕೆ.ಎನ್.ಸುಜಾತಾ ಸಹ ವೆಂಕಟೇಶಪ್ಪ ತಂದಿರುವ ತಡೆಯಾಜ್ಞೆ ರದ್ದು ಮಾಡುವಂತೆ ನ್ಯಾಯಾಲಯದ ಕದ ತಟ್ಟಿದ್ದರು. ಇಬ್ಬರ ವಾದಗಳನ್ನು ಆಲಿಸಿ ತೀರ್ಪು ಕಾಯ್ದಿರಿಸಿದ್ದ ಕೆಎಟಿ ನ್ಯಾಯಾಲಯ ಗುರುವಾರ ತನ್ನ ತೀರ್ಪನ್ನು ಪ್ರಕಟಿಸಿದ್ದು, ವೆಂಕಟೇಶಪ್ಪ ಅರ್ಜಿ ವಜಾಗೊಳಿಸಿದೆ. ಇದರಿಂದ ಕೆ.ಎನ್.ಸುಜಾತಾ ಅವರನ್ನು ಮತ್ತೆ ಬಂಗಾರಪೇಟೆ ತಹಸೀಲ್ದಾರ್ ಆಗಿ ಮುಂದುವರೆಯಲಿದ್ದು ಎಲ್ಲ ಗೊಂದಲಗಳಿಗೆ ಕೋರ್ಟ ತೆರೆ ಎಳೆದಿದೆ. ಶುಕ್ರವಾರ ಕೆ.ಎನ್ ಸುಜಾತಾ ತಾಲೂಕು ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಿದರು.