

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಜನೋತ್ಸವ ಮಡಿಕೇರಿ ದಸರಾ ಉತ್ಸವಕ್ಕೆ ೫ ಕೋಟಿ ರೂಪಾಯಿ ಅನುದಾನ ಕೇಳಿ ಮನವಿ ಪತ್ರ ಸಲ್ಲಿಸಿದ ವೇಳೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರನ್ನು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಗದರಿಸುವುದು ಚರ್ಚೆಗೆ ಗ್ರಾಸವಾಗಿದೆ. ಏಯ್ ನಡಿಯಪ್ಪ… ಬರೀ ದುಡ್ಡು ಕೇಳೋದೆ ಆಯ್ತು ಎಂದು ಸಿಎಂ ಹೇಳಿರುವುದು ಟೀಕೆಗೆ ತುತ್ತಾಗಿದೆ.
ಬೆಂಗಳೂರಿನಲ್ಲಿ ಮೈಸೂರು ದಸರಾ ಕುರಿತು ಚರ್ಚಿಸಲು ಆಯೋಜಿಸಿದ್ದ ಸಭೆ ಸಂದರ್ಭ ಮಡಿಕೇರಿ ದಸರಾ ಉತ್ಸವಕ್ಕೆ ಅನುದಾನ ಕೋರಿ ಮನವಿ ಪತ್ರ ಸಲ್ಲಿಸಲಾಯಿತು. ಕೊಡಗಿನ ಬಗ್ಗೆ ತಾತ್ಸಾರ ಭಾವನೆ ಎಂಬ ಶಿರೋನಾಮೆಯೊಂದಿಗೆ ಸಿಎಂ ಗದರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾಗಾದರೆ ನಾವು ಯಾರನ್ನು ಅನುದಾನ ಕೇಳಬೇಕು. ಇವರೇನು ಕೊಡಗಿಗೆ ಭಿಕ್ಷೆ ನೀಡುವುದು. ಇದಕ್ಕೆ ಮುಂದೆ ಕೊಡಗಿನ ಮತದಾರರು ಉತ್ತರ ನೀಡಬೇಕೆಂದು ಕೊಡವಾಮೆ ಕೊಂಡಾಟ ಸಂಘಟನೆ ಸ್ಥಾಪಕಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ. ಇದರೊಂದಿಗೆ ಸಿಎಂ ನಡೆಗೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಮಡಿಕೇರಿ ಶಾಸಕರು, ವಿಧಾನ ಪರಿಷತ್ ಸದಸ್ಯರು ೫ ಕೋಟಿ ರೂ. ಅನುದಾನ ಕೇಳಿ ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಶಾಸಕರೊಂದಿಗೆ ಚರ್ಚಿಸಿ ಅನುದಾನ ಕೇಳಲಾಗುವುದು. ರಸ್ತೆ ಅಭಿವೃದ್ಧಿಗೆ ಅನುದಾನದ ಅಗತ್ಯತೆ ಇದ್ದು, ಶಾಸಕರ ಮನವಿಗೆ ಪೂರಕವಾಗಿ ಬೇಡಿಕೆ ಸಲ್ಲಿಸ ಲಾಗುವುದೆಂದು ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಹೇಳಿದ್ದಾರೆ.
ವೇದಿಕೆ ನಿರ್ಮಾಣ
ಕಳೆದ ವರ್ಷ ಮಡಿಕೇರಿ ದಸರಾ ಉತ್ಸವಕ್ಕೆ ರಾಜ್ಯ ಸರ್ಕಾರ ೧ ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಸರಳ ದಸರಾ ಹಿನ್ನೆಲೆಯಲ್ಲಿ ವಿಜಯದಶಮಿಯಂದು ದಶಮಂಟಪ ಶೋಭಾಯಾತ್ರೆಗೆ ಮಾತ್ರ ಸೀಮಿತ ಮಾಡಲಾಗಿತ್ತು. ೧ ಕೋಟಿ ರೂ. ಅನುದಾನದಲ್ಲಿ ೨೫ ಲಕ್ಷ ರೂ. ಮಾತ್ರ ದಸರಕ್ಕೆ ವಿನಿಯೋಗಿಸಲಾಗಿತ್ತು.
೭೫ ಲಕ್ಷ ರೂ. ವೆಚ್ಚದಲ್ಲಿ ಗಾಂಧಿ ಮೈದಾನದಲ್ಲಿ ವೇದಿಕೆ ನಿರ್ಮಿಸಲು ನೀಲನಕ್ಷೆ ಸಿದ್ಧ ಪಡಿಸಲಾಗಿದೆ. ೮ ಅಡಿ ಎತ್ತರ, ೮೦ ಅಡಿ ಉದ್ದ, ೬೦ ಅಡಿ ಅಗಲದ ವೇದಿಕೆ ನಿರ್ಮಿಸಲಾಗುತ್ತದೆ ಎಂದು ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
**
ಮೈಸೂರು ದಸರಕ್ಕೆ ಸಂಬಂಧಿಸಿದ್ದಂತೆ ಸಂಸದ ಪ್ರತಾಪ್ ಸಿಂಹ ಅವರಿಗೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರು ದಸರಕ್ಕೆ ಸಂಬಂಧಿಸಿದ ಕಿರಿಕಿರಿ ಹಿನ್ನೆಲೆಯಲ್ಲಿ ಸಿಎಂ ಆ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಮಡಿಕೇರಿ ದಸರಾ ಉತ್ಸವಕ್ಕೆ ೫ ಕೋಟಿ ರೂ. ಅನುದಾನಕ್ಕೆ ಕೋರಿಕೆ ಸಲ್ಲಿಸ ಲಾಗಿದೆ. ಎಂ.ಪಿ. ಸುಜಾ ಕುಶಾಲಪ್ಪ, ಸದಸ್ಯರು, ವಿಧಾನ ಪರಿಷತ್.
**