

ಚಿಕ್ಕಮಗಳೂರು: ದೇಶದಲ್ಲಿ ಪ್ರತಿ 5 ನಿಮಿಷಕ್ಕೆ ಇಬ್ಬರು ಕ್ಷಯ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಸಕಾಲದಲ್ಲಿ ಹಾಗೂ ಸಂಪೂರ್ಣ ಗುಣಹೊಂದುವವರೆಗೆ ನಿರಂತರ ಚಿಕಿತ್ಸೆ ಪಡೆದರೆ ರೋಗದಿಂದ ಮುಕ್ತರಾಗಬಹುದು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು. ನಗರದ ತಾಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬುಧವಾರ ಆಯೋಜಿಸಿದ್ದ ವಿಶ್ವ ಕ್ಷಯ ರೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಅರಿವು ಮೂಡಿಸುವುದು ಅಗತ್ಯ:
ಕ್ಷಯ ರೋಗಿಗಳು ಮಾನಸಿಕ ಖಿನ್ನತೆಗೂ ಒಳಗಾಗುತ್ತಾರೆ. ಜನರಲ್ಲಿ ಕ್ಷಯ ರೋಗದ ಹರಡುವಿಕೆ, ಲಕ್ಷಣಗಳ ತಿಳಿವಳಿಕೆ ಕೊರತೆ ಇರುವುದರಿಂದ ಅರಿವು ಮೂಡಿಸಿದಲ್ಲಿ ರೋಗ ತಡೆಗಟ್ಟಬಹುದು ಎಂದು ಹೇಳಿದರು. ವಿಶ್ವ ಆರೋಗ್ಯ ಸಂಸ್ಥೆಯು 2030ರೊಳಗೆ ಕ್ಷಯ ರೋಗ ಮುಕ್ತ ವಿಶ್ವ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ. ಭಾರತವು 2025 ರೊಳಗಾಗಿ ಕ್ಷಯ ರೋಗ ಮುಕ್ತವಾಗುವ ಗುರಿ ಇಟ್ಟುಕೊಂಡಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಿದೆ. ಜಿಲ್ಲೆಯಲ್ಲಿ 875 ಕ್ಷಯ ರೋಗಿಗಳು ಇದ್ದಾರೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಕ್ಷಣದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕಲಾ ತಂಡಗಳು, ಭಿತ್ತಿಪತ್ರಗಳು ಹಾಗೂ ಮಾಧ್ಯಮದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚೆಚ್ಚು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಕ್ಷಯರೋಗ ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜನರು ಸಹಕರಿಸಬೇಕು. ಹಾಗಿದ್ದಲ್ಲಿ 2025ರೊಳಗೆ ಚಿಕ್ಕಮಗಳೂರನ್ನು ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಬಹುದು ಎಂದರು. ಜಿಲ್ಲಾ ಸರ್ಜನ್ ಡಾ. ಸಿ.ಮೋಹನ್‍ಕುಮಾರ್ ಮಾತನಾಡಿ, ರೋಗಿಗಳು ಗುಣವಾಗುವವರೆಗೂ ಚಿಕಿತ್ಸೆ ಮುಂದುವರಿಸಬೇಕು ಎಂದು ಹೇಳಿದರು.
2025ರೊಳಗೆ ರೋಗ ಮುಕ್ತಗೊಳಿಸಿ:
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ 11 ಕಲಾ ತಂಡಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕೆಂಪು ದೀಪ ಉರಿಸುವ ಮೂಲಕ ಕ್ಷಯ ರೋಗದ ಅರಿವು ಮೂಡಿಸಲಾಗುತ್ತಿದೆ. ಕ್ಷಯ ನಿರ್ಮೂಲನೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಕ್ಷಯ ರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕರಿಸಬೇಕೆಂದು ಡಿಎಚ್‍ಒ ಡಾ.ಎಸ್.ಎನ್.ಉಮೇಶ್ ತಿಳಿಸಿದರು. ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿದಲ್ಲಿ 2025ಕ್ಕೆ ಮುಂಚಿತವಾಗಿಯೇ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಮಾಡಲು ಸಾಧ್ಯ. ಕಡ್ಡಾಯವಾಗಿ ಕಫ ತಪಾಸಣೆ ಮಾಡುವ ಮೂಲಕ ರೋಗಿಗಳನ್ನು ಗುರುತಿಸಿ ಗುಣಮುಖರನ್ನಾಗಿ ಮಾಡಲು ಸಹಕರಿಸಬೇಕು ಎಂದು ಹೇಳಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಟಿ.ಪಿ.ಬಾಲಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿ ಕೆ.ಎನ್.ರಮೇಶ್ ಕ್ಷಯರೋಗದ ಕುರಿತು ಅರಿವು ಮೂಡಿಸುವ ವಾಹನಕ್ಕೆ ಹಸಿರು ನಿಶಾನೆ ತೋರಿದರು. ಕ್ಷಯ ನಿರ್ಮೂಲನೆಗಾಗಿ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಗೀತಾ, ತಾಲೂಕು ವೈದ್ಯಾಧಿಕಾರಿ ಡಾ.ಸೀಮಾ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಹರೀಶ್‍ಬಾಬು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಕೆ.ಮಂಜುನಾಥ್, ಜಿಲ್ಲಾ 2ನೇ ಹೆಚ್ಚುವರಿ ಶಸ್ತ್ರಚಿಕಿತ್ಸಕ ಡಾ.ನಾಗೇಂದ್ರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ ಇತರರಿದ್ದರು.