

ಕಂಪ್ಲಿ: ಮಕ್ಕಳಲ್ಲಿ ಕಲಿಕಾ ಸಂಭ್ರಮ ಹೆಚ್ಚಿಸಿ, ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಆಸಕ್ತಿಯನ್ನು ಪ್ರೇರೇಪಿಸುವುದೇ ಕಲಿಕಾ ಹಬ್ಬದ ಉದ್ದೇಶವಾಗಿದೆ ಎಂದು ಪ್ರಭಾರ ಸಿಆರ್‌ಪಿ ಚಂದ್ರಯ್ಯ ಸೊಪ್ಪಿಮಠ ಹೇಳಿದರು.
ತಾಲೂಕಿನ ಬೆಳಗೋಡ್‌ಹಾಳ್ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಶನಿವಾರ 8ನೇವಾರ್ಡ್ ಕ್ಲಸ್ಟರ್ ಹಮ್ಮಿಕೊಂಡಿದ್ದ ಎಫ್.ಎಲ್.ಎನ್ ಬಲವರ್ಧನೆಯ ಕಲಿಕಾ ಹಬ್ಬದಲ್ಲಿ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳನ್ನು ಪಠ್ಯ,ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಕಲಿಕಾಸಕ್ತಿಯನ್ನ ಹೆಚ್ಚಿಸಲು ಕಲಿಕಾಹಬ್ಬ ಸೂಕ್ತ ವೇದಿಕೆಯಾಗಿದೆ ಎಂದರು.
ನಂ.10ಮುದ್ದಾಪುರ ಗ್ರಾಪಂ.ಅಧ್ಯಕ್ಷ ಸೋಮೇಶ್ವರಿ ಪರಶುರಾಮ ಕಲಿಕಾ ಹಬ್ಬ ಮೆರವಣಿಗೆ ಚಾಲನೆ ನೀಡಿದರು. ಕಲಿಕಾ ಹಬ್ಬದ ಮೆರವಣಿಗೆ ಶಾಲೆಯಿಂದ ಆರಂಭಗೊಂಡು ಗ್ರಾಮದಲ್ಲೆಲ್ಲ ಸಂಚರಿಸಿತು. ಬಾಲಕಿಯರು ಸೀರೆಯುಟ್ಟು ಕಳಸಧಾರತಿ ಹಿಡಿದು ಸಂಭ್ರಮಿಸಿದರು. ಕಲಿಕಾ ಹಬ್ಬದ ನಾನಾ ಚಟುವಟಿಕೆಗಳಲ್ಲಿ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ಪಲ್ಲಕ್ಕಿ ಪರಶುರಾಮ, ಗ್ರಾಪಂ ಕಾರ್ಯದರ್ಶಿ ಜಿ.ವೀರಭದ್ರಗೌಡ, ಸದಸ್ಯ ದುರುಗಪ್ಪ, ಶಾಲಾ ಭೂದಾನಿ ಸಿ.ಮಲ್ಲಿಕಾರ್ಜುನ, ಶಿಕ್ಷಕ ಪ್ರತಿನಿಧಿಗಳಾದ ಎಂ.ಎ.ನಾಗನಗೌಡ, ಸುನಿತಾ ಪೂಜಾರಿ, ಉಪ ಪ್ರಾಚಾರ್ಯೆ ಸುಜಾತಾ, ಇಸಿಒಗಳಾದ ಎಂ.ರೇವಣ್ಣ, ಜಿ.ವೀರೇಶ, ಟಿ.ಎಂ.ಬಸವರಾಜ, ಸಿಆರ್‌ಪಿ ರೇಣುಕಾರಾಧ್ಯ, ಭೂಮೇಶ್ವರ ಇತರರಿದ್ದರು.