

ಆನೇಕಲ್: ಕಾರು ಅಪಘಾತವಾಗಿರುವ ವಿಷಯ ಕುಟುಂಬದವರಿಗೆ ತಿಳಿಯುತ್ತದೆ ಎಂದು ಭಯಗೊಂಡ ಕಾನೂನು ವಿದ್ಯಾರ್ಥಿ ಪಟ್ಟಣದ ಈಡನ್ ಗಾರ್ಡನ್ಸ್ ಲೇಔಟ್‌ನಲ್ಲಿ ಭಾನುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಮಿಳುನಾಡಿನ ಹೊಸೂರು ಮೂಲದ ಕೌಶಿಕ್ (22) ಮೃತ. ಆನೇಕಲ್ ಬಳಿಯ ಖಾಸಗಿ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದ ಈತ ಈಡನ್ ಗಾರ್ಡನ್ಸ್ ಲೇಔಟ್‌ನಲ್ಲಿ ಮನೆ ಬಾಡಿಗೆ ಪಡೆದು ಸ್ನೇಹಿತನ ಜತೆ ವಾಸವಿದ್ದ. ಭಾನುವಾರ ರಾತ್ರಿ ಹೊಸೂರಿನಿಂದ ಆನೇಕಲ್‌ಗೆ ಸ್ನೇಹಿತನ ಜತೆ ಕಾರಿನಲ್ಲಿ ಬರುವಾಗ ಗುಡ್ನಹಳ್ಳಿ ಕೆರೆ ಬಳಿ ಅಪಘಾತವಾಗಿ ಕಾರು ಸಂಪೂರ್ಣ ಜಖಂಗೊಂಡಿತ್ತು. ಯುವಕರು ಸಣ್ಣಪುಟ್ಟ ಗಾಯಗಳಾಗಿ ಪಾರಾಗಿದ್ದರು.
ಸ್ಥಳೀಯರು ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಆಸ್ಪತ್ರೆಗೆ ಹೋಗದೆ ಮನೆಗೆ ಹೋಗಿ ಸ್ನೇಹಿತನನ್ನು ರೂಮಿನಲ್ಲಿ ಕೂಡಿ ಹಾಕಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೂಮಿನಲ್ಲಿದ್ದ ಯುವಕನ ಕಿರುಚಾಟ ಕೇಳಿ ಸ್ಥಳೀಯರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆನೇಕಲ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.