ಸೂಯಿಸೈಡ್ ಸ್ಪಾಟ್ ಕೊರ್ಲಹಳ್ಳಿ ತುಂಗಭದ್ರೆಯ ಸೇತುವೆ!

15 MDG STORY
Published on

ಸಂತೋಷ ಮುರಡಿ ಮುಂಡರಗಿ

ತಾಲೂಕಿನ ಕೊರ್ಲಹಳ್ಳಿ ಹಾಗೂ ವಿಜಯನಗರ ಜಿಲ್ಲೆ ಹೂವಿನಹಡಗಲಿ ಮಧ್ಯದಲ್ಲಿ ಹರಿದಿರುವ ತುಂಗಭದ್ರಾ ನದಿಗೆ ಅಡ್ಡಲಾಗಿರುವ ಸೇತುವೆಯು ‘ಸೂಯಿಸೈಡ್ ಸ್ಪಾಟ್’ ಎನ್ನುವ ಕುಖ್ಯಾತಿ ಪಡೆದುಕೊಳ್ಳುತ್ತಿದೆ. ಜೀವನದಲ್ಲಿ ಜಿಗುಪ್ಸೆ ಇನ್ನಿತರ ಕಾರಣಗಳಿಂದಾಗಿ ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಆತ್ಮಹತ್ಯೆಯಂಥ ಹೀನ ಕೃತ್ಯಕ್ಕೆ ಕಡಿವಾಣ ಹಾಕಬೇಕು ಮತ್ತು ಸೇತುವೆಗೆ ತಡೆಗೋಡೆ ನಿರ್ಮಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ.

ಗದಗ ಹಾಗೂ ವಿಜಯನಗರ ಜಿಲ್ಲೆಗಳ ಮಧ್ಯದ ಈ ಕೊರ್ಲಹಳ್ಳಿ ಸೇತುವೆ ಮೇಲಿಂದ ಅನೇಕರು ಬಿದ್ದು ಪ್ರಾಣಬಿಟ್ಟಿದ್ದಾರೆ. ಎರಡು ವರ್ಷದಲ್ಲಿ ಆರು ಜನ ತುಂಗಭದ್ರಾ ನದಿಗೆ ಹಾರಿದ್ದಾರೆ ಎನ್ನುವ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ. ಆದರೆ, ಸ್ಥಳೀಯ ಮೀನುಗಾರರು ಹೇಳೋ ಪ್ರಕಾರ ಎರಡು ವರ್ಷಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊರ್ಲಹಳ್ಳಿ ಸೇತುವೆ ಮೇಲಿಂದ ತುಂಗಭದ್ರಾ ನದಿಗೆ ಜಿಗಿದರೆ ಶವಗಳು ಬೇರೆ ಬೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಸಿಗುತ್ತವೆ. ಹೀಗಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವುದಿಲ್ಲ. ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೇ ದೂರ ದಾಖಲಾಗುತ್ತವೆ.

ಇನ್ನೂ ಕೆಲ ತಿಂಗಳ ಹಿಂದೆ ಮೂರು ಜನರು ಇದೇ ಸೇತುವೆ ಮೇಲಿಂದ ಬಿದ್ದಾಗ ಸ್ಥಳೀಯ ಮೀನುಗಾರರು ನೋಡಿ ಅವರನ್ನು ರಕ್ಷಣೆ ಮಾಡಿದ ಘಟನೆ ಸಹ ನಡೆದಿದೆ. ಇಲ್ಲಿಯ ಮೀನುಗಾರರು ಅನೇಕರನ್ನು ರಕ್ಷಣೆ ಮಾಡಿದ್ದಾರೆ.

ಬಹುತೇಕ ಜೀವನದಲ್ಲಿ ಜಿಗುಪ್ಸೆ ಹೊಂದಿದವರೇ ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಸೇತುವೆಗೆ ಪೊಲೀಸರ ಗಸ್ತು ವ್ಯವಸ್ಥೆ ಮಾಡಬೇಕು. ಹಾಗೆಯೆ ಸೇತುವೆಗೆ ಎತ್ತರವಾಗಿ ತಡೆಗೋಡೆ ಅಥವಾ ಕಬ್ಬಿಣದ ಗ್ರಿಲ್ ಅಳವಡಿಸಬೇಕು. ವಿದ್ಯುತ್ ದೀಪಗಳನ್ನು ಅಳವಡಿಸಿ ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ. ಇತ್ತೀಚೆಗೆ ಇದೇ ಸೇತುವೆ ಮೇಲಿಂದ ತಾಲೂಕಿನ ಮಕ್ತುಂಪುರ ಗ್ರಾಮದ ಮೂವರು ಸಣ್ಣ ಮಕ್ಕಳನ್ನು ತುಂಗಭದ್ರಾ ನದಿಗೆ ಎಸೆದು ಆ ವ್ಯಕ್ತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಕಷ್ಟು ಆತ್ಮಹತ್ಯೆ ಪ್ರಕರಣಗಳು ಈ ಭಾಗದಲ್ಲಿ ನಡೆಯುತ್ತಿವೆ. ಆದ್ದರಿಂದ ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಕೊರ್ಲಹಳ್ಳಿ ಸೇತುವೆಗೆ ಎತ್ತರವಾಗಿ ಕಬ್ಬಿಣದ ಗ್ರಿಲ್ ಹಾಕುವುದು, ಸಿಸಿ ಕ್ಯಾಮರಾ, ವಿದ್ಯುತ್ ದೀಪ ಅಳವಡಿಕೆಯ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಇಲಾಖೆಯನ್ನು ಸಂಪರ್ಕಿಸಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಈ ಭಾಗದಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಸೂಕ್ತ ಕ್ರಮ ವಹಿಸಲಾಗುವುದು.

ಎರ‌್ರಿಸ್ವಾಮಿ ಪಿ.ಎಸ್. ತಹಸೀಲ್ದಾರ್ ಮುಂಡರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net