ಸೋಲು ಸ್ವೀಕರಿಸುವ ಗುಣವಿರಲಿ : ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಎಚ್. ಸಲಹೆ

Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಭಾರತದಲ್ಲಿ ನಲವತ್ತು ಸೆಕೆಂಡಿಗೊಂದು ಆತ್ಮಹತ್ಯೆ ಆಗುತ್ತಿದೆ. ಸಾಮಾಜಿಕ, ವೈಯುಕ್ತಿಕ, ಮಾನಸಿಕ ಖಿನ್ನತೆ, ರೋಗಾದಿ ಶಾರೀರಿಕ ಸಮಸ್ಯೆ, ಹೆದರಿಕೆ, ಸಾಲ ಇತ್ಯಾದಿಗಳಿಂದ ಮನುಷ್ಯ ಸಮಸ್ಯೆಗಳನ್ನು ಹೊಂದಿದ್ದರೆ ಆತನ ಮನಸ್ಸು ವಿಚಲಿತವಾಗುತ್ತದೆ. ಆತ ಆತ್ಮಹತ್ಯೆಗೆ ಯತ್ನಿಸುತ್ತಾನೆ. ಹೀಗಾದಾಗ ಮನುಷ್ಯನಲ್ಲಿ ಸಹಜವಾಗಿ ವರ್ತನೆಯಲ್ಲಿ ಬದಲಾವಣೆ ಆಗುತ್ತದೆ. ಆಗ ಅಂತಹವರಿಗೆ ಆಪ್ತ ಸಮಾಲೋಚನೆ ಹಾಗೂ ಕುಟುಂಬದಲ್ಲಿ ಆಪ್ತರಾಗಿರುವ ವ್ಯಕ್ತಿಗಳ ಸಲಹೆ ಅಗತ್ಯ. ಸೋಲನ್ನು ಸ್ವೀಕರಿಸುವ ಗುಣ ಹೊಂದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಅವಕಾಶ ಇರುವುದಿಲ್ಲ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಎಚ್. ಹೇಳಿದರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ಆತ್ಮಹತ್ಯಾ ತಡೆ ದಿನದ ಅಂಗವಾಗಿ ನಡೆದ ಭವಿಷ್ಯ ಕಾದಿದೆ... ಆತ್ಮಹತ್ಯೆ ಬೇಡ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಪಪ್ರಾಚಾರ್ಯ ಡಾ.ರಾಜೇಶ್ ಬಿ.ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಆತ್ಮಹತ್ಯಾ ಜಾಗೃತಿ ಉಂಟಾಗಬೇಕು ಎಂದರು. ರಾ.ಸೇ.ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಘಟಕದ ನಾಯಕರಾದ ಆದಿತ್ಯ ಶರ್ಮಾ ಹಾಗೂ ಪ್ರಾಪ್ತಿ ಗೌಡ ಉಪಸ್ಥಿತರಿದ್ದರು. ಶ್ರೇಯಾ ಸ್ವಾಗತಿಸಿ, ಮೌಲ್ಯ ಪರಿಚಯಿಸಿದರು. ಶ್ರಮ ನಿರೂಪಿಸಿ, ಸಂತೋಷ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net