ಒಂದೇ ಕುಟುಂಬದ ಮೂವರ ಆತ್ಮಹತ್ಯೆ

suicide
ಆತ್ಮಹತ್ಯೆಗೆ ಶರಣಾದ ದರ್ಶನ್, ಭುವನೇಶ್ವರಿ ಹಾಗೂ ದರ್ಶನ್
Published on

ಶಿವಮೊಗ್ಗ: ಒಂದೇ ಕುಟುಂಬದ ಮೂವರು ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಓಟಿ ರಸ್ತೆಯಲ್ಲಿ ನಡೆದಿದೆ. ಓರ್ವ ಮಹಿಳೆ, ಆಕೆಯ ಕಿರಿಯ ಸಹೋದರ ಹಾಗೂ ಪುತ್ರ ಆತ್ಮಹತ್ಯೆ ಮಾಡಿಕೊಂಡವರು. ಇವರೆಲ್ಲರೂ ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನಗಳಿವೆ.

ಭುವನೇಶ್ವರಿ (40), ಆಕೆಯ ಸಹೋದರ ಮಾರುತಿ(37), ಪುತ್ರ ದರ್ಶನ್(20) ಆತ್ಮಹತ್ಯೆಗೆ ಶರಣಾದವರು. ಇವರೆಲ್ಲರೂ ಹಲವು ವರ್ಷಗಳಿಂದ ಓಟಿ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಭುವನೇಶ್ವರಿ ಹೋಟೆಲ್‌ವೊಂದರಲ್ಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆಕೆಯ ಪುತ್ರ ದರ್ಶನ್ ಕೂಡಾ ಸಣ್ಣ ಪುಟ್ಟ ಸಂಪಾದನೆ ಮಾಡಿ ತಾಯಿಗೆ ಹೆಗಲು ನೀಡಿದ್ದ. ಮಾರುತಿ ಸಹೋದರಿಯ ಕುಟುಂಬದೊಂದಿಗೆ ವಾಸವಿದ್ದರು.
ಭುವನೇಶ್ವರಿಯ ಮತ್ತೋರ್ವ ಸಹೋದರ ಶಿವು ಎಂಬುವವರು ಪಂಚವಟಿ ಕಾಲನಿಯಲ್ಲಿ ವಾಸವಿದ್ದಾರೆ. ಇವರು ಸಹೋದರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಕೊನೆಯ ಬಾರಿಗೆ ಆ.10ರಂದು ಫೋನ್‌ನಲ್ಲಿ ಮಾತನಾಡಿದ್ದರು. ಆ.11ರಿಂದ ಮಂಗಳವಾರದ ಬೆಳಗ್ಗೆವರೆಗೆ ಮೂರ‌್ನಾಲ್ಕು ಬಾರಿ ಫೋನ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ಬಾರದೇ ಇದ್ದಾಗ ಶಿವು ಅನುಮಾನಗೊಂಡಿದ್ದರು.
ಮಂಗಳವಾರ ಬೆಳಗ್ಗೆ 10ರ ಸುಮಾರಿಗೆ ಸಹೋದರಿಯ ಮನೆಗೆ ಬಂದು ಕರೆದರೂ ಯಾರೂ ಬಾಗಿಲು ತೆಗೆಯಲಿಲ್ಲ. ಕೂಡಲೇ ದೊಡ್ಡಪೇಟೆ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ಬಾಗಿಲು ತೆರೆದು ನೋಡಿದಾಗ ಮೂರು ಜನರ ಶವ ಕಾಣಿಸಿದೆ. ಸ್ಥಳದಲ್ಲಿ ಆಹಾರಕ್ಕೆ ವಿಷ ಬೆರೆಸಿ ಸೇವಿಸಿರುವುದು ದೃಢಪಟ್ಟಿದೆ. ಶವಗಳು ಕೊಳೆತ ವಾಸನೆ ಬರುತ್ತಿದ್ದ ಕಾರಣ ಇವರೆಲ್ಲರೂ ಆ.10ರ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದೆ. ಶವಗಳ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಅನಾರೋಗ್ಯ ಕಾರಣವೇ?: ಭುವನೇಶ್ವರಿ ಕುಟುಂಬದ ಬಗ್ಗೆ ನೆರೆಹೊರೆಯವರಿಗೆ ಹೆಚ್ಚಿನ ಮಾಹಿತಿಯಿಲ್ಲ. ಈ ಕುಟುಂಬ ಕಷ್ಟಪಟ್ಟ ಸಂಪಾದನೆ ಮಾಡಿ ಜೀವನ ನಿರ್ವಹಣೆ ಮಾಡುತ್ತಿತ್ತು. ಮನೆಯಲ್ಲಿ ಜಗಳ, ಗಲಾಟೆ ನಡೆದ ನಿದರ್ಶನಗಳಿಲ್ಲ ಎನ್ನುತ್ತಾರೆ ನೆರೆಮನೆಯವರು. ಆದರೆ ಪೊಲೀಸರು ಸಂಗ್ರಹಿಸಿರುವ ಮಾಹಿತಿ ಪ್ರಕಾರ ಮಾರುತಿ ಅವರಿಗೆ ಅನಾರೋಗ್ಯ ಸಮಸ್ಯೆಯಿತ್ತು. ಅವರ ಹವ್ಯಾಸ ಹಾಗೂ ನಡವಳಿಕೆಗಳ ಬಗ್ಗೆಯೂ ಭವನೇಶ್ವರಿ ಹಾಗೂ ಅವರ ಪುತ್ರನಿಗೆ ಅಸಮಾಧಾನವಿತ್ತು. ಇದು ಆತ್ಮಹತ್ಯೆಗೆ ಕಾರಣವಿರಬಹುದು ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net