

ಬೇಲೂರು: ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಗೋಡು ಗ್ರಾಮದಲ್ಲಿ ಸಾಲ ಬಾಧೆಯಿಂದ ಯುವಕನೊಬ್ಬ ವಿಷ ಸೇವಿಸಿ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬೇಲೂರು ತಾಲೂಕಿನ ಕೋಗೋಡು ಗ್ರಾಮದ ನಾಗೇಶ್ (27) ಆತ್ಮಹತ್ಯೆ ಮಾಡಿಕೊಂಡವನು.
ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ನಾಗೇಶ್ ತನ್ನ ಇಬ್ಬರು ಸಹೋದರಿಯರ ವಿವಾಹಕ್ಕೆಂದು ವಿವಿಧೆಡೆ ಸಾಲ ಮಾಡಿದ್ದ. ಆದರೆ ತಾನು ಕೂಲಿ ಮಾಡಿ ಬಂದ ಹಣದಲ್ಲಿ ಸಾಲ ತೀರಿಸಲಾಗದೆ ಮನನೊಂದು ಸೋಮವಾರ ಬೆಳಗ್ಗೆ ಗ್ರಾಮದ ತನ್ನ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಾಗೇಶ್, ವಿಷ ಸೇವಿಸಿ ಒದ್ದಾಡುವುದನ್ನು ಗಮನಿಸಿದ ಗ್ರಾಮಸ್ಥರು ಆತನನ್ನು ಚಿಕಿತ್ಸೆಗಾಗಿ ಬೇಲೂರು ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ಕೊನೆಯುಸಿರೆಳೆದಿದ್ದಾನೆ.
ನಾಗೇಶ್‌ಗೆ ತಂದೆ ಹಾಗೂ ಇಬ್ಬರು ಸಹೋದರಿಯರಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.