ಮಗು ಹೊಂದುವ ವಿಚಾರಕ್ಕೆ ಆತ್ಮಹತ್ಯೆ, ಗರ್ಭಿಣಿ ಸಾವಿನ ಹಿಂದೆ ಪತಿ ಕೈವಾಡ ಶಂಕೆ, ಪೊಲೀಸರಿಂದ ಬಂಧನ

10 Nela Ph 02 Thasildar visit
Published on

ನೆಲಮಂಗಲ: ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಪತ್ನಿ, ಮತ್ತೊಂದು ಮಗು ಬೇಡವೇ ಬೇಡ ಎಂಬುದು ಪತಿಯ ಆದೇಶ. ಇದೇ ವಿಚಾರವಾಗಿ ಪತ್ನಿ-ಪತಿ ನಡುವಿನ ವಿರಸ ವಿಕೋಪಕ್ಕೆ ಹೋಗಿ ಗರ್ಭಿಣಿ ಸಾವಿಗೆ ಶರಣಾಗಿದ್ದಾಳೆ.

ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಚಿಕ್ಕಬಿದಕಲ್ಲುವಿನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಬೆಂಗಳೂರು ಉತ್ತರ ತಾಲೂಕು ಚನ್ನನಾಯಕನಪಾಳ್ಯದ ನಿವಾಸಿ ರಮ್ಯಾ (24) ಮೃತೆ. ದೊಡ್ಡಬಳ್ಳಾಪುರ ತಾಲೂಕು ಇಸ್ತೂರು ಗ್ರಾಮದ ಪತಿ ಅರುಣ್‌ಗೌಡ ಬಂಧಿತ.

4 ವರ್ಷದ ಹಿಂದೆ ಸಪ್ತಪದಿ ತುಳಿದಿದ್ದ ದಂಪತಿಗೆ 3 ವರ್ಷದ ಗಂಡು ಮಗುವಿದೆ. ಇದರ ನಡುವೆ ರಮ್ಯಾ 2 ತಿಂಗಳ ಗರ್ಭಣಿಯಾಗಿದ್ದರು. ಪತಿಗೆ ಎರಡನೇ ಮಗು ಇಷ್ಟವಿರಲಿಲ್ಲ ಎನ್ನಲಾಗಿದೆ.

ರಮ್ಯಾ ಮೃತದೇಹದ ಮೇಲೆ ಹಲ್ಲೆ ಗುರುತುಗಳನ್ನು ಗಮನಿಸಿದ ಪಾಲಕರು ಅಳಿಯನ ವಿರುದ್ಧ ಕೊಲೆ ದೂರು ದಾಖಲಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆತ್ಮಹತ್ಯೆ ಮುನ್ನ ಕರೆ ಮಾಡಿದ್ದ ರಮ್ಯಾ: ಆತ್ಮಹತ್ಯೆಗೂ ಮುನ್ನ ತಂದೆಗೆ ಕರೆ ಮಾಡಿದ್ದ ರಮ್ಯಾ, ಪತಿ ಹಾಗೂ ಸಹೋದರಿ ಮಂಜುಳಾ ಹಲ್ಲೆ ಮಾಡಿರುವುದಾಗಿ ತಿಳಿಸಿದ್ದಳು. ಸಂಜೆ ಮಾತನಾಡುವುದಾಗಿ ಮಗಳಿಗೆ ಸಮಾಧಾನ ಹೇಳಲಾಗಿತ್ತು. ಆದರೆ ಕೆಲವೇ ಗಂಟೆಗಳ ಬಳಿಕ ಅರುಣ್‌ಗೌಡ ಮಗಳ ಆತ್ಮಹತ್ಯೆ ವಿಚಾರ ತಿಳಿಸಿದ್ದ ಎಂದು ರಮ್ಯಾ ಪಾಲಕರು ತಿಳಿಸಿದ್ದಾರೆ.

ದಂಪತಿ ನಡುವೆ ಕುಟುಂಬ ಕಲಹವಿತ್ತು, ಆಗಾಗ ರಾಜಿಯೂ ನಡೆದಿತ್ತು. ಇತ್ತೀಚಿಗೆ ರಮ್ಯಾಳ ಮತ್ತೊಬ್ಬ ಸಹೋದರಿಗೆ ವಿವಾಹ ತಯಾರಿ ನಡೆದಿತ್ತು. ರಮ್ಯಾ ತಂದೆ ಹೆಸರಿನಲ್ಲಿ 3 ನಿವೇಶನಗಳಿದ್ದು ವಿವಾಹಕ್ಕಾಗಿ ಮಾರಾಟ ಮಾಡುವವರಿದ್ದರು. ವಿಷಯ ತಿಳಿದ ಅರುಣ್‌ಗೌಡ ಹಣ ತರುವಂತೆ ಪೀಡಿಸುತ್ತಿದ್ದ ಎಂಬುದನ್ನು ರಮ್ಯಾ ಪಾಲಕರು ದೂರಿನಲ್ಲಿ ದಾಖಲಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕು ತಹಸೀಲ್ದಾರ್ ಧನಲಕ್ಷ್ಮೀ ಹಾಗೂ ಡಿವೈಎಸ್ಪಿ ಬಿ.ಎಸ್.ಮೋಹನ್ ಕುಮಾರ್, ಮಾದನಾಯಕನಹಳ್ಳಿ ವೃತ್ತ ನಿರೀಕ್ಷಕ ಸತ್ಯನಾರಾಯಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net