ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು?

mysore suicide case
Published on

ಮೈಸೂರು: ನಗರದ ಚಾಮುಂಡಿಪುರಂನ ಮನೆಯೊಂದರಲ್ಲಿ ಭಾನುವಾರ ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆಯ ರೀತಿ ಕಂಡು ಬಂದಿದೆ.

ಮೂಲತಃ ಬರಡನಪುರ ನಿವಾಸಿಯಾಗಿರುವ, ಪ್ರಸ್ತುತ ಚಾಮುಂಡಿಪುರಂನಲ್ಲಿ ನೆಲೆಸಿದ್ದ ಮಹದೇವಸ್ವಾಮಿ (48), ಅವರ ಪತ್ನಿ ಅನಿತಾ (35), ಮಕ್ಕಳಾದ ಚಂದ್ರಕಲಾ (17) ಹಾಗೂ ಧನಲಕ್ಷ್ಮಿ (15) ಮೃತಪಟ್ಟವರು. ಚಂದ್ರಕಲಾ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಅನಿತಾ ಮೃತದೇಹ ಕುರ್ಚಿ ಮೇಲೆ, ಧನಲಕ್ಷ್ಮಿ ಮೃತದೇಹ ಕೊಠಡಿಯಲ್ಲಿ, ಮಹದೇವಸ್ವಾಮಿ ಮೃತದೇಹ ಹಾಲ್‌ನಲ್ಲಿ ಪತ್ತೆಯಾಗಿದೆ. ಮಹದೇವಸ್ವಾಮಿ, ಅನಿತಾ ಹಾಗೂ ಧನಲಕ್ಷ್ಮಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಚಂದ್ರಕಲಾ ಪ್ರಥಮ ಪಿಯುಸಿ, ಧನಲಕ್ಷ್ಮಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅನಿತಾ ಅವರು ಹುಣಸೂರು ತಾಲೂಕಿನ ಕರಣನಕುಪ್ಪೆ ಗ್ರಾಮದ ನಿವಾಸಿಯಾಗಿದ್ದಾರೆ. ಚಾಮುಂಡಿಪುರಂ, ವಿದ್ಯಾರಣ್ಯಪುರಂ ಸೇರಿದಂತೆ ವಿವಿಧೆಡೆ ಅವರು ಕಳೆದ 15 ವರ್ಷ ಗಳಿಂದ ವಾಸವಾಗಿದ್ದರು. 15 ವರ್ಷಗಳ ಅವಧಿಯಲ್ಲಿ ಅವರು ಸಾಕಷ್ಟು ಮನೆಗಳನ್ನು ಬದಲಾಯಿಸಿದ್ದರು. ಎರಡು ತಿಂಗಳ ಹಿಂದಷ್ಟೇ ಅವರು ಪ್ರಸ್ತುತ ಇರುವ ಮನೆಗೆ ವಿದ್ಯಾರಣ್ಯಪುರಂಗೆ ಆಗಮಿಸಿದ್ದರು. ಕೆಳ ಮನೆಯಲ್ಲಿ ಮಹದೇವಸ್ವಾಮಿ ದಂಪತಿ ಹಾಗೂ ಮಕ್ಕಳು ವಾಸವಾಗಿದ್ದರು. ಮಹಡಿಯಲ್ಲಿ ಮಾಲೀಕರು ವಾಸವಾಗಿದ್ದರು.

ಅತಿಯಾದ ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ. ಎರಡು ಅಥವಾ ಮೂರು ದಿನಗಳ ಹಿಂದೆ ನಾಲ್ವರು ಮೃತಪಟ್ಟಿರುವ ಸಾಧ್ಯತೆ ಇದ್ದು, ಭಾನುವಾರ ಮನೆಯಿಂದ ವಾಸನೆ ಬರಲು ಪ್ರಾರಂಭವಾಯಿತು. ಬಾಗಿಲು ಬಡಿದರೂ ಯಾರು ಬಾಗಿಲು ತೆರೆಯದೆ ಇದ್ದಾಗ ಅನುಮಾನಗೊಂಡು ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದರು. ವಿಷಯ ತಿಳಿದು ಮಧ್ಯಾಹ್ನ 1.30ಕ್ಕೆ ಆಗಮಿಸಿದ ಕೃಷ್ಣರಾಜ ಠಾಣೆ ಪೊಲೀಸರು ಮಹಾಜರು ನಡೆಸಿದರು. ಮನೆಯನ್ನು ಶೋಧಿಸಿದ ಪೊಲಿಸರು ವಿವಿಧ ದಾಖಲೆ ಗಳನ್ನು ಪಡೆದುಕೊಂಡಿದ್ದಾರೆ. ಪೊಲೀಸ್ ಮಾಹಿತಿ ಪ್ರಕಾರ ಮನೆಯಲ್ಲಿ ಡೆತ್‌ನೋಟ್ ಕಂಡು ಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net