

ಚಿಕ್ಕಬಳ್ಳಾಪುರ: ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ಬಾಬುವಿನ ಪ್ರಕರಣವು ಮತ್ತೊಂದು ತಿರುವು ಪಡೆದುಕೊಂಡಿದೆ. ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ, ಮೃತನೇ ಗೆಳೆಯನಿಂದ ಹಣ ಸ್ವೀಕರಿಸಿರುವ ಆರೋಪ ಕೇಳಿ ಬಂದಿದೆ.
ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಗೆ ಬಂದು ಗೌರಿಬಿದನೂರು ತಾಲೂಕಿನ ಇಡಗೂರಿನ ನಟೇಶ್ ಎಂಬಾತ ನ್ಯಾಯಕ್ಕಾಗಿ ಆಗ್ರಹಿಸಿದ್ದಾನೆ. ಫೋನ್ ಪೇ ಮೂಲಕ, ಹಾಗೆಯೇ ನೇರವಾಗಿ ಬಾಬು ಹಣ ಪಡೆದುಕೊಂಡಿದ್ದ ಎನ್ನಲಾದ ದಾಖಲೆಗಳನ್ನು ಸಲ್ಲಿಸಿದ್ದು ಇದೀಗ ಆತ್ಮಹತ್ಯೆ ಪ್ರಕರಣದ ತನಿಖೆಯು ಮತ್ತೊಂದು ತಿರುವು ಪಡೆದುಕೊಂಡಿದೆ.
*ಹೊಸ ತಿರುವೇನು?
೨೦೨೧ ರಲ್ಲಿ ಆರೋಗ್ಯ ಸಚಿವರಾಗಿದ್ದ ಡಾ ಕೆ.ಸುಧಾಕರ್ ಮೂಲಕ ಕೆಲಸ ಕೊಡಿಸುವುದಾಗಿ ಹೇಳಿ ೨೫ ಲಕ್ಷ ರೂಗಳನ್ನು ವಂಚಿಸಿದ್ದಾರೆ. ಕೆಲಸಾನೂ ಸಿಗಲಿಲ್ಲ. ಹಣ ಸಹ ಕೊಡಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡಿದರು ಎಂದು ಆರೋಪಿಸಿ ಜಿ.ಪಂ.ಲೆಕ್ಕಾಧಿಕಾರಿ ಕಚೇರಿಯ ಹೊರಗುತ್ತಿಗೆಯಾಧಾರಿತ ಚಾಲಕ ಬಾಬು ಡೆತ್ ನೋಟ್ ಬರೆದು, ಜಿಲ್ಲಾಡಳಿತ ಭವನದ ಆವರಣದಲ್ಲಿ ನೇಣಿಗೆ ಶರಣಾಗಿದ್ದ. ಈ ಪ್ರಕರಣದ ತನಿಖೆ ಬಿರುಸಿನಿಂದ ನಡೆಯುತ್ತಿದೆ. ಇದರ ನಡುವೆ ಮೃತನ ಗೆಳೆಯ ನಟೇಶ್ ಹಣದ ವಂಚನೆಯ ಬಗ್ಗೆ ದೂರು ಸಲ್ಲಿಸಿದ್ದಾನೆ.
ಬಾಬು ನನ್ನ ಬಾಲ್ಯ ಸ್ನೇಹಿತ. ಇಬ್ಬರು ಒಂದೇ ಊರಿನವರು. ಆತ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿದ್ದನ್ನು ನಂಬಿ ಹಂತ ಹಂತವಾಗಿ ೧೭ ಲಕ್ಷ ರೂಗಳನ್ನು ನೀಡಲಾಗಿದೆ. ವಂಚನೆಗೊಳಗಾಗಿ ಬೀದಿಗೆ ಬಂದಿರುವುದು ನಾನು ಎಂದು ಅಳಲು ತೋಡಿಕೊಂಡಿದ್ದಾನೆ.
*ಪ್ರಕರಣದ ಹಿನ್ನೆಲೆ
ಜಿಲ್ಲಾಡಳಿತ ಭವನದ ಆವರಣದಲ್ಲಿಯೇ ಜಿ.ಪಂ.ಹೊರ ಗುತ್ತಿಗೆ ನೌಕರ ಬಾಬು ಕಳೆದ ಆ.೭ ರಂದು ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಡಾ ಕೆ.ಸುಧಾಕರ್, ಇವರ ಬೆಂಬಲಿಗ ಎನ್‌ಎನ್ ಆರ್ ನಾಗೇಶ್, ಜಿ.ಪಂ.ಲೆಕ್ಕಾಧಿಕಾರಿ ಕಚೇರಿಯ ಸಹಾಯಕ ಗುಮಾಸ್ತ ಮಂಜುನಾಥ್, ಸೇರಿದಂತೆ ಮೂವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂಬ ಮನವಿಯ ಡೆತ್ ನೋಟ್ ಪತ್ತೆಯಾಗಿತ್ತು. ಪ್ರಕರಣವು ರಾಜಕೀಯ ಜಟಾಪಟಿ, ಹೋರಾಟಗಳಿಗೆ ಕಾರಣವಾಯಿತು.