

ಹುಬ್ಬಳ್ಳಿ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮುಂದುವರಿದಿದ್ದು, ಬಡ್ಡಿ ಕಿರುಕುಳದಿಂದ ವ್ಯಕ್ತಿಯೊಬ್ಬರು ಡೆತ್ ನೋಟ್ ಬರೆದಿಟ್ಟು ನಗರದ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಉಣಕಲ್ ನಿವಾಸಿ ಶಿವಾನಂದ ಕಳ್ಳಿಮನಿ (36) ಮೃತ ವ್ಯಕ್ತಿ. ಹಲವು ತಿಂಗಳ ಹಿಂದೆ ಕಾರ್ತಿಕ್ ಬಳ್ಳಾರಿ ಎಂಬುವವರ ಬಳಿ ನಾಲ್ಕು ಲಕ್ಷ ರೂ. ಸಾಲ ಪಡೆದು, ನಾಲ್ಕು ಲಕ್ಷಕ್ಕೆ ಈಗಾಗಲೇ ನಾಲ್ಕು ಲಕ್ಷ ರೂ. ಬಡ್ಡಿಯನ್ನು ಶಿವಾನಂದ ತುಂಬಿದ್ದರು. ಆದರೂ ನಿರಂತರವಾಗಿ ಬಡ್ಡಿ ನೀಡುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದು ಶಿವಾನಂದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ದೇಹವನ್ನು ಕೆಎಂಸಿಆರ್‌ಐಗೆ ರವಾನೆ ಮಾಡಲಾಗಿದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆತ್ ನೋಟ್ ಆಧರಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.