

ನ್ಯಾಮತಿ: ಸಾಲಬಾಧೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತಾಲೂಕಿನ ಗುಡ್ಡೇಹಳ್ಳಿ ಗ್ರಾಮದ ರೈತ ಇಂದೂಧರ್(62) ಸಮೀಪದ ಹೊಸಕೊಪ್ಪ ಗ್ರಾಮದ ಕೆರೆಗೆ ಹಾರಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷಿ ಚಟುವಟಿಕೆಗಾಗಿ ಯರಗನಾಳು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 30 ಸಾವಿರ ರೂ., ಸುರಹೊನ್ನೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಬಂಗಾರ ಅಡಮಾನ ಇಟ್ಟು 2 ಲಕ್ಷ ರೂ., ಮನೆ ನಿರ್ಮಾಣಕ್ಕಾಗಿ 2.70 ಲಕ್ಷ ರೂ. ಸೇರಿದಂತೆ ಇನ್ನಿತರ ಸಾಲ ಮಾಡಿದ್ದರು.
ಮಳೆ ಇಲ್ಲದೆ ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಸಾಲ ತೀರಿಸುವ ಮಾರ್ಗ ತಿಳಿಯದೆ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪತ್ನಿ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.