

ಬೆಂಗಳೂರು: ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗಾಗಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ‘ಸುಹೃದ್ ಆ್ಯಪ್’ ಅನ್ನು ಅಭಿವೃದ್ಧಿ ಪಡಿಸಿದ್ದು, ‘ಶೇಕ್ ಟು ಸೇಫ್ಟಿ’ ಶೀರ್ಷಿಕೆಯಡಿ ಈ ಆ್ಯಪ್ ಪರಿಚಯಿಸಿದೆ.
ಸಂಸ್ಥೆಯ ಲೈಂಗಿಕ ದೌರ್ಜನ್ಯ ತಡೆ ಸಮಿತಿ (ಪಾಶ್) ಈ ಆ್ಯಪ್ ಅಭಿವೃದ್ಧಿಪಡಿಸಿದ್ದು, ಈಗಾಗಲೇ ಸಂಸ್ಥೆಯ ವೈದ್ಯರು ಹಾಗೂ ಸಿಬ್ಬಂದಿ ಬಳಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಸ್ಮಾರ್ಟ್ ೆನ್ ಅನ್ನು ಮೂರು ಬಾರಿ ಅಲುಗಾಡಿಸಿದಲ್ಲಿ ಸಂಸ್ಥೆಯ ಸಂಬಂಧಪಟ್ಟ ನಿರ್ವಹಣಾ ಕೊಠಡಿಗೆ ಸಂದೇಶ ರವಾನೆಯಾಗಲಿದೆ.
ದೇಶದ ವಿವಿಧೆಡೆ ಇತ್ತೀಚೆಗೆ ವೈದ್ಯರು ಸೇರಿ ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಈ ಕ್ರಮ ಕೈಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆ್ಯಪ್ ನ ವೈಶಿಷ್ಟ್ಯತೆ:
‘ಸುಹೃದ್’ ಎಂದರೆ ಸಂಸ್ಕೃತದಲ್ಲಿ ‘ಒಳ್ಳೆಯ ಹೃದಯ’ ಎಂಬ ಅರ್ಥವಿದೆ. ಆದ್ದರಿಂದ ಈ ಆ್ಯಪ್‌ಗೆ ‘ಸುಹೃದ್’ ಎಂಬ ಹೆಸರಿಡಲಾಗಿದೆ. ಈ ಆ್ಯಪ್‌ನಲ್ಲಿ ತುರ್ತು ಸಹಾಯ (ಎಸ್‌ಒಎಸ್) ಬಟನ್ ಒತ್ತುವ ಆಯ್ಕೆಯನ್ನು ನೀಡಲಾಗಿದ್ದು, ಸ್ಮಾರ್ಟ್ ೆನ್ ಅಲುಗಾಡಿಸಿ ಅಥವಾ ಎಸ್‌ಒಎಸ್ ಆಯ್ಕೆ ಒತ್ತುವ ಮೂಲಕ ನೆರವು ಪಡೆಯಬಹುದಾಗಿದೆ. ಬಟನ್ ಒತ್ತಿದರೆ ಇಲ್ಲವೆ ೆನ್ ಅಲುಗಾಡಿಸಿದರೆ ಜಿಪಿಎಸ್ ತಂತ್ರಜ್ಞಾನದ ಮೂಲಕ ನಿಗದಿತ ಸ್ಥಳ ಸಹಿತ ತುರ್ತು ಸಂದೇಶವು ಸಂಸ್ಥೆಯ ರಕ್ಷಣಾ ಸಿಬ್ಬಂದಿ, ನಿರ್ದೇಶಕರು, ವೈದ್ಯರು ಹಾಗೂ ಸಿಬ್ಬಂದಿಗೆ ರವಾನೆಯಾಗಲಿದೆ. ಇದರಿಂದ ಕೂಡಲೇ ನೆರವಿಗೆ ಧಾವಿಸಲು ಸಾಧ್ಯವಾಗಲಿದೆ. ಈ ಕ್ರಮದಿಂದಾಗಿ ಇನ್ನು ನಿರ್ಭೀತಿಯಿಂದ ಕಾರ್ಯನಿರ್ವಹಿಸಬಹುದಾಗಿದೆ ಎನ್ನುತ್ತಾರೆ ಸಂಸ್ಥೆಯ ವೈದ್ಯರು ಹಾಗೂ ಸಿಬ್ಬಂದಿ.
ಜಯದೇವಹೃದ್ರೋಗ ಆಸ್ಪತ್ರೆಯು ಒಟ್ಟು 1,050 ಹಾಸಿಗೆಗಳನ್ನು ಒಳಗೊಂಡಿದೆ. ಜಗತ್ತಿನ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆಯಾಗಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವುದರಿಂದ ಚಿಕಿತ್ಸೆಗೆ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಪ್ರತಿ ವರ್ಷ 40 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಇಲ್ಲಿ ಆ್ಯಂಜಿಯೊಗ್ರಾಮ್, ಆ್ಯಂಜಿಯೋಪ್ಲಾಸ್ಟಿ, ಪೇಸ್‌ಮೇಕರ್ ಚಿಕಿತ್ಸೆ ಒದಗಿಸಲಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಕ್ಯಾಥ್‌ಲ್ಯಾಬ್ ಪ್ರಕ್ರಿಯೆಗಳನ್ನು ನಡೆಸುವ ಆಸ್ಪತ್ರೆ ಎಂಬ ಹೆಗ್ಗಳಿಕೆಗೂ ಜಯದೇವ ಆಸ್ಪತ್ರೆ ಪಾತ್ರವಾಗಿದೆ.